

ಸೋರಲಮಾವು ಶ್ರೀಹರ್ಷ
ತುಮಕೂರು: ರೈತರಿಂದ ಖರೀದಿಸಿದ ಉಂಡೆ ಕೊಬ್ಬರಿಯ ಬಾಕಿ ಹಣ ಪಾವತಿಗೂ ಮೊದಲೇ ಕೊಂಡ ಕೊಬ್ಬರಿಯನ್ನು ತರಾತುರಿಯಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿ "ನಫೆಡ್' ಮುಂದಾಗಿರುವುದು ಕನಿಷ್ಟ ಬೆಂಬಲ ಬೆಲೆ ಯೋಜನೆಯ ಉದ್ದೇಶವನ್ನೇ ಹಾಳುಮಾಡಿದಂತಾಗಿದೆ.
ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಕನಿಷ್ಟ ಬೆಂಬಲ ಬೆಲೆಯಲ್ಲಿ ಕೊಂಡ ಬೆಳೆಯನ್ನು ಸ್ವಲ್ಪ ದಿನ ಶೇಖರಿಸಿಟ್ಟು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗುವಂತೆ ಮಾಡುವ ನೈಜ ಉದ್ದೇಶವನ್ನೇ ಮರೆತಿರುವ ಕೇಂದ್ರ ಸರ್ಕಾರದ ಸಂಸ್ಥೆಯ ನಿಲುವು ತೆಂಗು ಬೆಳೆಗಾರರ ಆತಂಕ ಹೆಚ್ಚಿಸಿದೆ. ಹೆಚ್ಚು ತೆಂಗು ಬೆಳೆಯುವ ತುಮಕೂರು ಜಿಲ್ಲೆಯಲ್ಲಿಯೇ 102.36ಕೋಟಿ ರೂ. ಕೊಬ್ಬರಿ ಮಾರಿರುವ ರೈತರಿಗೆ ಬರಬೇಕಿದೆ.
ರಾಜ್ಯದಲ್ಲಿ ಜೂನ್ ಅಂತ್ಯದವರೆಗೂ ಕೊಬ್ಬರಿ ಖರೀದಿಸಲಾಗಿದ್ದು ಈವರೆಗೆ ಮೇ.31ರ ವರೆಗೆ ಮಾರಾಟ ಮಾಡಿರುವ 20882 ರೈತರಿಗೆ ಮಾತ್ರ ಹಣ ನೀಡಲಾಗಿದೆ, ಇನ್ನುಳಿದ 30 ದಿನ ಕೊಬ್ಬರಿ ಮಾರಾಟಿ ಮಾಡಿರುವ ರೈತರು ಹಣಕ್ಕಾಗಿ ಚಾತಕ ಪಯಂತೆ ಕಾಯುತ್ತಿದ್ದರೂ ಖಾತೆಗೆ ಹಣ ಬಂದಿಲ್ಲ, ಈ ಸಂದರ್ಭದಲ್ಲಿ ನೆಡ್ ಖರೀದಿಸಿರುವ ಕೊಬ್ಬರಿ ಮಾರಾಟಕ್ಕೆ ಮುಂದಾಗಿದೆ.
ಪಿಎಸ್ಎಸ್ ಮಾರ್ಗಸೂಚಿಯಂತೆ ಕೊಬ್ಬರಿ ಖರೀದಿಸಿದ ಮೂರು ದಿನದಲ್ಲಿ ರೈತರ ಖಾತೆಗೆ ಹಣ ವರ್ಗಾಹಿಸಬೇಕಿರುವುದು ಖರೀದಿ ಏಜೆನ್ಸಿಗಳ ಜವಬ್ಧಾರಿ ಎನ್ನಿಸಿದೆ ಆದರೆ, ರಾಜ್ಯ ಸರ್ಕಾರ ನೆಡ್ ಕಡೆ ಕೈತೋರಿಸಿ ಸುಮ್ಮನಾಗಿದೆ. ನೆದ್ ರೈತರಿಗೆ ಹಣ ನೀಡಲು ಖರೀದಿಸಿದ ಕೊಬ್ಬರಿ ಮಾರಾಟಕ್ಕೆ ಹರಾಜು ಪ್ರಕ್ರಿಯೆ ಆರಂಭಿಸಿದೆ.
ನಫೆಡ್ ತರಾತುರಿಯಲ್ಲಿ ಕೊಬ್ಬರಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ರೈತರಿಗೆ ಮತ್ತೊಂದು ರೀತಿಯಲ್ಲಿ ಅನ್ಯಾಯ ಮಾಡಿದಂತೆಯೇ ಆಗಲಿದೆ. ಕನಿಷ್ಟ ಬೆಂಬಲ ಬೆಲೆ ಪಿಎಸ್ಎಸ್ ಮಾರ್ಗಸೂಚಿಯಂತೆ ಖರೀದಿಸಿದ ಬೆಳೆಯನ್ನು 9 ತಿಂಗಳು ಶೇಖರಿಸಿಟ್ಟುಕೊಂಡು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಮೂಡಿಸುವ ಜವಬ್ಧಾರಿಯನ್ನು ನೆಡ್ ಮರೆತಿದೆ.
ನಫೆಡ್ 2023ರಲ್ಲಿಯೂ ತರಾತುರಿಯಲ್ಲಿ ಕೊಬ್ಬರಿಯನ್ನು ಕೇವಲ 7680ರೂ. ಮಾರಾಟ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಹೆಚ್ಚಾಗಲೇ ಇಲ್ಲ, ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾಗಿದ್ದರಿಂದ ಬೆಲೆ ಮತ್ತಷ್ಟು ಕೆಳಗಿಳಿಯಿತು, ತೆಂಗು ಬೆಳೆಗಾರರು ಬೀದಿಗೆ ಬಿದ್ದರು. ಈಗಲೂ ಅಷ್ಟೇ ನಫೆಡ್ ಕೊಬ್ಬರಿ ಹರಾಜು ಪ್ರಕ್ರೆಯೆ ನಿಲ್ಲಿಸಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬೇಡಿಕೆ ಸೃಷ್ಠಿಸಿದರಷ್ಟೇ ಬೆಲೆ ಹೆಚ್ಚಳ ನಿರೀಸಬಹುದು.
ನಫೆಡ್ ಕೊಬ್ಬರಿ ಮಾರಾಟ ಆರಂಭಿಸಿದ್ದು ತಮಿಳುನಾಡು, ಕೇರಳದಿಂದ ಮಿಲ್ಲಿಂಗ್ ಕೊಬ್ಬರಿ, ಕರ್ನಾಟಕದಿಂದ ಉಂಡೆ ಕೊಬ್ಬರಿಯನ್ನು ಮುಂದಿನ ಮೂರು ತಿಂಗಳಲ್ಲಿ ಮಾರಾಟ ಮಾಡಿ ಕೈತೊಳೆದುಕೊಳ್ಳಲಿದೆ. ಜು.17ರಂದು ತಮಿಳುನಾಡು, 19ರಂದು ಕರ್ನಾಟಕದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.
ತಮಿಳುನಾಡಿನಲ್ಲಿ 39472 ಮೆಟ್ರಿಕ್ಟನ್, ಕರ್ನಾಟಕದಲ್ಲಿ 68107ಮೆಟ್ರಿಕ್ ಟನ್ ಕೊಬ್ಬರಿಯನ್ನು ನೆಡ್ ಮಾರುಕಟ್ಟೆಗೆ ಬಿಟ್ಟರೆ ಮಂಡಿಯಲ್ಲಿ ಕೊಬ್ಬರಿ ಬೆಲೆ ಇನ್ನೂ ಇಳಿಕೆಯಾಗುವ ಅಪಾಯವಿದೆ. ಕೇರಳದಲ್ಲಿ 102 ಮೆಟ್ರಿಕ್ ಟನ್ ಮಾತ್ರವಿದ್ದರೂ ಅಲ್ಲಿನ ಮಾರುಕಟ್ಟೆಯ ಮೇಲೂ ಕರ್ನಾಟಕ, ತಮಿಳುನಾಡು ಕೊಬ್ಬರಿ ಪ್ರಭಾವಬೀರಲಿದೆ.
ತಮಿಳುನಾಡಿನಲ್ಲಿ 2023ರಲ್ಲಿ ಕನಿಷ್ಟ ಬೆಲೆ ಯೋಜನೆಯಲ್ಲಿ ಖರೀದಿಸಿದ್ದ 30 ಸಾವಿರ ಮೆಟ್ರಿಕ್ ಟನ್ ಮಿಲ್ಲಿಂಗ್ ಕೊಬ್ಬರಿ ಮಾರಾಟವಾಗದೆ ಉಳಿದಿದ್ದು ಈ ಕೊಬ್ಬರಿಯನ್ನು ಅತೀ ಕಡಿಮೆ ಬೆಲೆಗೆ ಹರಾಜು ಹಾಕುವ ಸಾಧ್ಯತೆಯಿದ್ದು ಮಾರುಕಟ್ಟೆಯಲ್ಲಿ ಬೆಲೆ ನಂಬಿರುವ ರೈತರಿಗೆ ಅಘಾತ ಎದುರಾಗಲಿದೆ.
ಕರ್ನಾಟಕದಲ್ಲಿ 68107 ಮೆಟ್ರಿಕ್ ಟನ್ ಕೊಬ್ಬರಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು 2022, 2023ರಂತೆಯೇ ಇದು ಕ್ವಿಂಟಾಲ್ಗೆ 6 ಸಾವಿರ ಆಸುಪಾಸಿನಲ್ಲಿಯೇ ಹರಾಜಾಗುವ ಸಾಧ್ಯತೆಯಿದೆ. ಇಷ್ಟು ಬೆಲೆಗೆ ಕೊಬ್ಬರಿ ಸಿಕ್ಕರೆ ರೈತರ ಕೊಬ್ಬರಿಯನ್ನು ಮಂಡಿಯಲ್ಲಿ ಕೇಳುವವರೇ ಇಲ್ಲದಂತಾಗುತ್ತದೆ.
ಹಾಗಾಗಿ, ನಫೆಡ್ ಖರೀದಿಸಿರುವ ಕೊಬ್ಬರಿಯನ್ನು ಕೂಡಲೇ ಹರಾಜು ಮಾಡದೆ ಕೊಬ್ಬರಿ ಎಣ್ಣೆಯನ್ನಾಗಿ ಸಂಸ್ಕರಿಸಿ "ಭಾರತ್ ಬ್ರಾಂಡ್' ಅಕ್ಕಿ, ಗೋಧಿ ಮಾದರಿಯಲ್ಲಿ ತೆಂಗಿನ ಎಣ್ಣೆಯನ್ನು ಜನರಿಗೆ ನೀಡಬೇಕು ಎಂದು ತೆಂಗಿನ ಸೀಮೆಯ ರೈತರ ಒತ್ತಾಯವಿದೆ.
ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿ ನೆಡ್, ರಾಜ್ಯ ಸರ್ಕಾರದ ನೋಡಲ್ ಏಜೆನ್ಸಿ ಕೃಷಿ ಮಾರಾಟ ಮಂಡಳಿ ಮೂಲಕ ಜೂನ್ ಅಂತ್ಯದವರೆಗೂ ಖರೀದಿಸಿರುವ ಕೊಬ್ಬರಿಗೆ ತುಮಕೂರು ಜಿಲ್ಲೆಯಲ್ಲಿಯೇ ಬರೋಬ್ಬರಿ 102.36ಕೋಟಿ ರೂ. ಬಾಕಿ ನೀಡಬೇಕಿದೆ.
ತುಮಕೂರು ಜಿಲ್ಲೆಯಲ್ಲಿ 27320ರೈತರು ಮಾರಾಟಕ್ಕೆ ನೋಂದಣಿ ಮಾಡಿದ್ದು ಮೇ ಅಂತ್ಯದವರೆಗೂ ಮಾರಾಟ ಮಾಡಿದ್ದ 20882 ರೈತರಿಗೆ ಮಾತ್ರ 294.71ಕೋಟಿ ರೂ. ಖಾತೆಗೆ ವರ್ಗಾವಣೆಯಾಗಿದೆ. ಇನ್ನೂ 6501 ರೈತರ 88.42ರೂ. ಬಾಕಿ ಉಳಿದಿದೆ.
ರಾಜ್ಯ ಸರ್ಕಾರ ನೀಡುವ 1500ರೂ. ಪ್ರೋತ್ಸಾಹಧನ ಕೂಡ ಬಾಕಿ ಉಳಿದಿದ್ದು ಇನ್ನೂ 8173 ರೈತರಿಗೆ 13.94ಕೋಟಿ ರೂ. ತೆಂಗು ಬೆಳೆಗಾರರಿಗೆ ಬರಬೇಕಿದೆ. ಕೃಷಿ ಮಾರಾಟ ಮಂಡಳಿ ಮೇ.31ರ ವರೆಗೂ 20882 ರೈತರಿಗೆ ಎಂಎಸ್ಪಿ ಹಣವನ್ನು ಪಾವತಿಸಿದ್ದರೂ ಇಷ್ಟೇ ಪ್ರಮಾಣದ ರೈತರಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಮಾತ್ರ ತಲುಪಿಸದೆ 19150 ರೈತರಿಗೆ ಮಾತ್ರ ನೀಡಿದೆ.
ಇನ್ನುಳಿದ ರೈತರನ್ನು ಏಕೆ ಸಹಾಯಧನಕ್ಕೆ ಪರಿಗಣಿಸಿಲ್ಲ ಎಂಬ ಮಾಹಿತಿಯನ್ನೇ ನೀಡಿಲ್ಲ.
ರೈತರ ಒತ್ತಾಯಕ್ಕೆ ಮಣಿಸಿರುವ ಕೇಂದ್ರ ಸರ್ಕಾರ ರಾಜ್ಯದಲ್ಲಿಯೂ 10 ಸಾವಿರ ಮೆಟ್ರಿಕ್ ಟನ್ ಮಿಲ್ಲಿಂಗ್ ಕೊಬ್ಬರಿ ಖರೀದಿಗೆ ಮುಂದಾಗಿದೆ, ಶ್ರೀದಲ್ಲಿಯೇ ನೋಂದಣಿ ಕೂಡ ಆರಂಭವಾಗಲಿದ್ದು ಯಾರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.
2024ರ ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ಈಗಾಗಲೇ ಉಂಡೆ ಕೊಬ್ಬರಿ ಮಾರಾಟ ಮಾಡಿರುವ ರೈತರನ್ನು ಹೊರತುಪಡಿಸಿ ನೋಂದಣಿಗೆ ಅವಕಾಶ ಪಡೆಯದ ರೈತರಿಂದ ಮಿಲ್ಲಿಂಗ್ ಕೊಬ್ಬರಿ ಖರೀದಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಮಿಲ್ಲಿಂಗ್ ಕೊಬ್ಬರಿ ಮಾರಾಟ ಮಾಡುವ ರೈತರಿಗೂ ರಾಜ್ಯ ಸರ್ಕಾರದ ಕ್ವಿಂಟಾಲ್ಗೆ 1500ರೂ. ಪ್ರೋತ್ಸಾಹಧನ ನೀಡಬೇಕು ಎಂಬ ಒತ್ತಾಯವಿದ್ದು ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲವಿದೆ.
ಕನಿಷ್ಟ ಬೆಂಬಲ ಬೆಲೆ ಯೋಜನೆಯ ಉದ್ದೇಶ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ತರುವುದಾಗಿದ್ದರೂ ಖರೀದಿಸಿರುವ ಕೊಬ್ಬರಿಯನ್ನು ಕೇಂದ್ರ ಸರ್ಕಾರದ ನೆಡ್ ಸಂಸ್ಥೆ ತರಾತುರಿಯಲ್ಲಿ ಮಾರಾಟ ಮಾಡಲು ಹಾರಾಜು ಆರಂಭಿಸಿರುವುದು ಅವೈಜ್ಞಾನಿಕ ಎನ್ನಿಸಿದೆ. ಕನಿಷ್ಟ 8 ತಿಂಗಳು ಕೊಬ್ಬರಿ ಮಾರುಕಟ್ಟೆಗೆ ಬರದೆ ಬೇಡಿಕೆ ಹೆಚ್ಚಾದರಷ್ಟೇ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಖರೀದಿದ ಬೆಲೆಗಿಂತ ಅರ್ಧ ಬೆಲೆಗೆ ಕೊಬ್ಬರಿ ನೆಡ್ ಕೊಬ್ಬರಿ ಮಾರಾಟ ಮಾಡಿದರೆ ಮಂಡಿಗಳಿಗೆ ಯಾರೂ ಬಂದು ರೈತರ ಕೊಬ್ಬರಿ ಕೇಳುವುದಿಲ್ಲ. ಈ ಬಗ್ಗೆ ಕೂಡಲೇ ಕೇಂದ್ರ ಕೃಷಿ ಇಲಾಖೆಯ ಗಮನ ಸೆಳೆಯುವ ಕೆಲಸವಾಗಬೇಕು.ಬಿ.ಯೋಗೀಶ್ವರಸ್ವಾಮಿಜಿಲ್ಲಾ ಸಂಚಾಲಕ, ಕರಾರೈಸಂ(ಸಾಮೂಹಿಕ ನಾಯಕತ್ವ)