

ತುಮಕೂರು: ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ಜಿಲ್ಲೆಯಲ್ಲಿ 3.50ಲಕ್ಷ ಕ್ವಿಂಟಾಲ್ ಕೊಬ್ಬರಿ ಖರೀದಿಗೆ ಅವಕಾಶವಿದ್ದು ಮಂಗಳವಾರದ ಅಂತ್ಯಕ್ಕೆ ಜಿಲ್ಲೆಯ 23 ಖರೀದಿ ಕೇಂದ್ರಗಳಲ್ಲಿ 7585 ರೈತರು 93192 ಕ್ವಿಂಟಾಲ್ ಕೊಬ್ಬರಿ ಮಾರಲು ನೋಂದಣಿ ಮಾಡಿಸಿದ್ದಾರೆ.
ನೋಂದಣಿ ಆರಂಭವಾದ ಎರಡನೇ ದಿನಕ್ಕೆ ಖರೀದಿಯ ಗರಿಷ್ಟ ಮಿತಿಯಲ್ಲಿ ಶೇ.30ರಷ್ಟು ಪೂರ್ಣಗೊಂಡಿದ್ದು 259808 ಕ್ವಿಂಟಾಲ್ ಖರೀದಿಗೆ ಇನ್ನೂ ಅವಕಾಶವಿದೆ. ಮುಂದಿನ ಐದಾರು ದಿನದಲ್ಲಿ ಜಿಲ್ಲೆಗೆ ನೀಡಿರುವ ಕೊಬ್ಬರಿ ಖರೀದಿ ಮಿತಿ ದಾಟಲಿರುವ ಹಿನ್ನೆಲೆಯಲ್ಲಿ ಆತಂಕಗೊAಡಿರುವ ರೈತರು ಖರೀದಿ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ.
ಖರೀದಿ ಕೇಂದ್ರದಲ್ಲಿ ರೈತರ ಬಯೋಮೆಟ್ರಿಕ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಮಹಿಳಾ ಖಾತೆದಾರರು ಸರತಿಯಲ್ಲಿ ಕಾದು ನೋಂದಣಿ ಮಾಡಿಸಬೇಕಿರುವುದು ಸಮಸ್ಯೆ ತಂದೊಡ್ಡಿದೆ. ಖರೀದಿ ಕೇಂದ್ರದ ಬಳಿ ಶೌಚಾಲಯಕ್ಕೂ ವ್ಯವಸ್ಥೆ ಇಲ್ಲದಿರುವುದು ರೈತ ಮಹಿಳೆಯರಿಗೆ ತೊಂದರೆ ತಂದೊಡ್ಡಿದೆ.
ನೋಂದಣಿಯಲ್ಲಿ ತಾಂತ್ರಿಕ ತೊಂದರೆಯಾದ ಹಿನ್ನೆಲೆಯಲ್ಲಿ ತುರುವೇಕೆರೆಯಲ್ಲಿ ರೈತರು ಖರೀದಿ ಕೇಂದ್ರದ ಸಿಬ್ಬಂದಿಗೆ ಘೆರಾವ್ ಹಾಕಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ತಿಪಟೂರು ತಾಲೂಕು ಕೊನೆಹಳ್ಳಿ ಖರೀದಿ ಕೇಂದ್ರದಲ್ಲಿಯೂ ಸಾವಿರಾರು ಜನರು ಸರತಿಯಲ್ಲಿ ನಿಂತು ನೋಂದಣಿ ಮಾಡಿಸಿದರು.
ಜಿಲ್ಲೆಯ 23 ಖರೀದಿ ಕೇಂದ್ರದಲ್ಲಿ ಜನದಟ್ಟಣೆ ತೀವ್ರವಾಗಿದ್ದು ನಿಯಂತ್ರಿಸಲು ಪೊಲೀಸರ ನೆರೆವು ಪಡೆಯಲಾಗಿದೆ. ಸರತಿಯಲ್ಲಿ ಬರುತ್ತಿರುವ ರೈತರಿಗೆ ನೀರು, ನೆರಳಿನ ವ್ಯವಸ್ಥೆ ಕೂಡ ಇಲ್ಲದೆ ಪರದಾಡಿಕೊಂಡು ನೋಂದಣಿ ಮಾಡಿಸುವ ಸ್ಥಿತಿಯಿದೆ.
ಜಿಲ್ಲೆಯಲ್ಲಿ 3.50ಲಕ್ಷ ಕ್ವಿಂಟಾಲ್ ಕೊಬ್ಬರಿ ಖರೀದಿಗೆ ಅವಕಾಶ ನೀಡಲಾಗಿದೆ.