

ಸೋರಲಮಾವು ಶ್ರೀಹರ್ಷ
ತುಮಕೂರು: ಕೇಂದ್ರದಲ್ಲಿ ಜಿಲ್ಲೆಯ ಸಂಸದರೇ ಮಂತ್ರಿಯಾಗಿದ್ದರೂ ತೆಂಗು ಬೆಳೆಗಾರರ ಹಿತ ಕಾಯಲು ಸಾಧ್ಯವಾಗಿಲ್ಲ, ಕೇಂದ್ರ ಸರ್ಕಾರ ಉಂಡೆ ಕೊಬ್ಬರಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಿ ಆದೇಶಿಸಿದ್ದು ಒಂದು ಕೆಜಿಗೆ ಕೇವಲ 1ರೂ. ಮಾತ್ರ ಹೆಚ್ಚಳವಾಗಿರುವುದು ತೆಂಗು ಬೆಳೆಗಾರರಿಗೆ ಭಾರಿ ನಿರಾಸೆ ತಂದಿದೆ.
ಶುಕ್ರವಾರ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದ್ದು ಉಂಡೆ ಕೊಬ್ಬರಿಗೆ ಕ್ವಿಂಟಲ್ 12100ರೂ. ಹಾಗೂ ಮಿಲ್ಲಿಂಗ್ ಕೊಬ್ಬರಿ ಕ್ವಿಂಟಲ್ಗೆ 11480ರೂ. ಹೆಚ್ಚಿಸಲು ಒಪ್ಪಿಗೆ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಕೆಜಿ ಕೊಬ್ಬರಿಗೆ 140ರೂ. ಇದೆಯಾದರೂ ಕೇಂದ್ರ ಸರ್ಕಾರ ಬೆಲೆ ಹೆಚ್ಚಿಸಿರುವುದು ಮಾತ್ರ 1ರೂ.ಮಾತ್ರ.
2014ರ ಎಂಎಸ್ಪಿ ದರವನ್ನು ಲೆಕ್ಕಾ ಹಾಕಿರುವ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಶೇ.120ರಷ್ಟು ಬೆಲೆಯನ್ನು ಹೆಚ್ಚಿಸಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ ಆದರೆ, ಸಮಿತಿ 2023ರ ಎಂಎಸ್ಪಿಯನ್ನು ಪರಿಗಣನೆಗೆ ತೆಗೆದುಕೊಂಡು ದರ ಹೆಚ್ಚಿಸಿದ್ದರೆ ತೆಂಗು ಬೆಳೆಗಾರರ ಬದುಕು ಉಳಿಯುತ್ತಿತ್ತಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಸ್ತುತ ಕ್ವಿಂಟಲ್ ಕೊಬ್ಬರಿಗೆ 12000 ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಿದ್ದು 2025ನೇ ವರ್ಷಕ್ಕೆ ಕೇವಲ ನೂರು ರೂ. ಹೆಚ್ಚಿಸಿರುವುದು ಇತಿಹಾಸದಲ್ಲಿಯೇ ಅತೀ ಕಡಿಮೆ ಪ್ರಮಾಣದ ಹೆಚ್ಚಳ ಎನ್ನಿಸಿದೆ. ಕೇಂದ್ರದಲ್ಲಿ ಜಿಲ್ಲೆಯ ಸಂಸದ ವಿ.ಸೋಮಣ್ಣ ಅವರೇ ಮಂತ್ರಿಯಾಗಿದ್ದರೂ ತೆಂಗು ಬೆಳೆಗಾರರ ಹಿತ ಕಾಯಲು ಸಾಧ್ಯವಾಗಿಲ್ಲ.
2025 ಋತುವಿನಲ್ಲಿ ಕೊಪ್ಪರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಅನುಮೋದನೆ ನೀಡಿದ್ದು 2025ರ ಋತುವಿನಲ್ಲಿ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಹೆಚ್ಚಳವಾಗಲಿದೆ. ಇದೇ ಸಮಿತಿಯಲ್ಲಿ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೂ ಸದಸ್ಯರಾಗಿದ್ದರೂ ಕೊಬ್ಬರಿ ಕನಿಷ್ಟ ಬೆಂಬಲ ಬೆಲೆ ಹೆಚ್ಚಳವಾಗದಿರುವುದು ಈಗಾಗಲೇ ನಷ್ಟದಲ್ಲಿರುವ ರೈತರಲ್ಲಿ ಆತಂಕ ಮೂಡಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬೆಲೆ 14 ಸಾವಿರ ರೂ. ಆಸುಪಾಸಿನಲ್ಲಿಯೇ ಇದ್ದು ಮುಂದಿನ ದಿನಗಳಲ್ಲಿ ಬೆಲೆ 12100ರೂ. ಗಿಂತಲೂಮ ಕೆಳಗಿಳಿಸಿದರೆ ಮಾತ್ರ ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ಕೊಬ್ಬರಿ ಖರೀದಿಗೆ ಮುಂದಾಗಲಿದೆ. ಕೊಬ್ಬರಿ, ತೆಂಗು ಹಾಗೂ ಸೆಣಬು ಬೆಳೆಗಳಿಗೆ ಮಾತ್ರ ವರ್ಷದಲ್ಲಿ ಒಮ್ಮೆ ಮಾತ್ರ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಲಾಗುತ್ತಿದೆ.
ತೆಂಗು ಬೆಳೆಗಾರರೇ ಸಚಿವರಾದರೂ ನಿರಾಸೆ! ಕೇಂದ್ರ ಸರ್ಕಾರ 11160ರೂ. ಇದ್ದ ಎಣ್ಣೆ ತಯಾರಿಕೆಗೆ ಮಾತ್ರ ಉಪಯೋಗವಾಗುವ ಮಿಲ್ಲಿಂಗ್ ಕೊಬ್ಬರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಕ್ವಿಂಟಲ್ಗೆ 320ರೂ. ಹೆಚ್ಚಿಸಿದ್ದು 11480ರೂ.ಗೆ ನಿಗದಿಗೊಳಿಸಿದೆ. ಈ ಮಿಲ್ಲಿಂಗ್ ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇರಳ ಹಾಗೂ ತಮಿಳುನಾಡು ಸಂಸದರು ದೆಹಲಿಯಲ್ಲಿ ನಿರಂತರವಾದ ಹೋರಾಟ ನಡೆಸಿ ಕೊಂಚಮಟ್ಟಿಗಾದರೂ ಯಶಸ್ವಿಯಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಉತ್ಪಾದಿಸಲಾಗುತ್ತಿರುವ ಅಡುಗೆ ಎಣ್ಣೆ ಹಾಗೂ ತಿನ್ನಲು ಬಳಸುವ ಉಂಡೆ ಕೊಬ್ಬರಿಗೆ ಕನಿಷ್ಟ ಬೆಂಬಲ ಬೆಲೆ ಕೆಜಿಗೆ 1ರೂ. ಮಾತ್ರ ಹೆಚ್ಚಳವಾಗಿದೆ. ಕ್ವಿಂಟಲ್ಗೆ ಇದ್ದ 12000ರೂ. ಬೆಲೆ 12100ರೂ.ಗೆ ಹೆಚ್ಚಿಸಲಾಗಿದೆ. ಪ್ರಧಾನಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಕೇವಲ ಒಂದು ರೂ. ಹೆಚ್ಚಿಸಿ ಆದೇಶಿಸಿದ್ದರೂ ಸಮಿತಿಯ ಸದಸ್ಯರಾಗಿರುವ ಸ್ವತ@ ತೆಂಗು ಬೆಳೆಗಾರರೂ ಆದ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತೆಂಗು ಬೆಳೆಗಾರರ ಹಿತ ಕಾಯಲು ವಿಲರಾಗಿದ್ದಾರೆ ಎಂಬ ನಿರಾಸೆ ಮೂಡಿಸಿದೆ.
ಉಂಡೆ ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿರುವ ಸಂದರ್ಭದಲ್ಲಿ ಕನಿಷ್ಟ ಬೆಂಬಲ ಬೆಲೆಯನ್ನು 15 ಸಾವಿರಕ್ಕೆ ಹೆಚ್ಚಿಸಬೇಕು ಎಂಬುದು ರೈತರ ಬೇಡಿಕೆಯಾಗಿತ್ತು ಆದರೆ, ಇತಿಹಾಸದಲ್ಲಿಯೇ ಕೊಬ್ಬರಿಗೆ ಅತೀ ಕಡಿಮೆ 100ರೂ. ಎಂಎಸ್ಪಿ ದರ ಹೆಚ್ಚಿಳವಾಗಿದ್ದು ಕೇಂದ್ರ ಸರ್ಕಾರದ ಕೆಜಿಗೆ ಕೇವಲ 1ರೂ. ಮಾತ್ರ ಹೆಚ್ಚಿಸಿರುವುದು ನಿರಾಸೆ ಮೂಡಿಸಿದೆ. ತುಮಕೂರು ಜಿಲ್ಲೆಯ ಸಂಸದರೇ ಕೇಂದ್ರದಲ್ಲಿ ಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ನಿರೀೆ ಇತ್ತು ಆದರೆ, ತೆಂಗು ಬೆಳೆಗಾರರಿಗೆ ಆದ ಅನ್ಯಾಯವಾಗಿದೆ. ಕೇಂದ್ರ ಸಚಿವರು ಕೂಡಲೇ ಪ್ರಧಾನಿಗಳ ಮೇಲೆ ಒತ್ತಡ ತಂದಾದರೂ ರೈತರ ಹಿತ ಕಾಪಾಡಬೇಕು. ನಾಗೇಶ್ ಬೆಳಿಗೆರೆ ತೆಂಗು ಬೆಳೆಗಾರ