ತೆಂಗಿನ ತೋಟದಲ್ಲಿ ರೋಗೋಸ್​ ಬಿಳಿನೊಣ ಬಾಧೆ

30-04-rama-coconut1
Published on

ತುಮಕೂರು: ತೆಂಗಿನ ತೋಟಗಳಲ್ಲಿ ರೋಗೋಸ್​ ಬಿಳಿ ನೊಣ ಬಾಧೆಯನ್ನು ತಡೆಗಟ್ಟುವ ಕ್ರಮಗಳ ಕುರಿತು ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ.

ತೆಂಗಿನ ಮರಗಳಲ್ಲಿ ರೋಗೋಸ್​ ಬಿಳಿ ನೊಣದ ಬಾಧೆ ಕಂಡು ಬಂದಾಗ ಎಕರೆಗೆ 10ರಂತೆ ಹಳದಿ ಅಂಟಿನ ಬಲೆಗಳನ್ನು ಅಳವಡಿಸಬೇಕು. ಪ್ರತಿ ಲೀ. ನೀರಿನಲ್ಲಿ 5 ಮಿ.ಲೀ. ಬೇವಿನ ಎಣ್ಣೆ ಮತ್ತು 0.5 ಗ್ರಾಂ ಸಾಬೂನು ಪುಡಿಯನ್ನು ಬೆರೆಸಿ 15 ದಿನಗಳ ಅಂತರದಲ್ಲಿ ಮೂರು ಬಾರಿ ಸಿಂಪಡಿಸಬೇಕು.

ಬೇವಿನ ಎಣ್ಣೆ ಸಿಂಪಡಿಸಿದ 10 ದಿನಗಳ ನಂತರ ರಭಸವಾಗಿ ನೀರನ್ನು ಸಿಂಪಡಣೆ ಮಾಡಬೇಕು. ಪರಿಸರ ಸ್ನೇಹಿ ಶಿಲೀಂದ್ರವಾದ ಲಖಾನಿ ಸಿಲಿಯಂ ಲೆಕ್ಯಾನ್ಲಿ ಪ್ರತಿ ಲೀ. ನೀರಿಗೆ 5 ಗ್ರಾಂ ಬೆರೆಸಿ ಎಲೆಯ ಕೆಳಭಾಗಕ್ಕೆ ಸಿಂಪಡಿಸಬೇಕು.

ತೆಂಗಿನ ಬೆಳೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ರೋಗೋಸ್​ ಬಿಳಿ ನೊಣದ ಪ್ರೌಢ ಕೀಟ ಇತರೆ ಸಾಮಾನ್ಯ ಬಿಳಿ ನೊಣಗಳಿಗಿಂತ ಮೂರು ಪಟ್ಟು ದೊಡ್ಡದಾಗಿರುತ್ತದೆ. ಹೆಣ್ಣು ಬಿಳಿ ನೊಣವು ಎಲೆಯ ಕೆಳಭಾಗದಲ್ಲಿ ವೃತ್ತಾಕಾರವಾಗಿ ಮೊಟ್ಟೆಯನ್ನು ಇಡುತ್ತದೆ. ಕೀಟವು ಹಳದಿ ಮೈಬಣ್ಣ ಹೊಂದಿದ್ದು, ಬಿಳಿ ಬಣ್ಣದ ರೆಕ್ಕೆಗಳ ಹಿಂಬದಿಯಲ್ಲಿ ಕಪ್ಪಾದ ಮಚ್ಚೆಗಳಿರುತ್ತದೆ.

ಮರಿಗಳು ಹಾಗೂ ಪ್ರೌಢ ಕೀಟಗಳು ಎಲೆಗಳಿಂದ ರಸ ಹೀರುತ್ತವೆ. ಕೀಟಗಳು ಸಿಹಿಯಾದ ಅಂಟು ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಬೂದು ಬಣ್ಣದ ಶಿಲೀಂದ್ರ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net