

ತುಮಕೂರು: ನಗರದ ಸಪ್ತಗಿರಿ ಬಡಾವಣೆ ಆರೋಗ್ಯ ಉದ್ಯಾನವನದ ಸಮೀಪದ ವಸತಿ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಚಿರತೆ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಜನರಲ್ಲಿ ಭಯ ಮೂಡಿಸಿದೆ.
ಶುಕ್ರವಾರ ರಾತ್ರಿ 1.20ರ ಸಮಯದಲ್ಲಿ ಯೂರಾಲಜಿಸ್ಟ್ ಡಾ.ರಂಗೇಗೌಡ ಮನೆ ಮುಂದೆ ಕಾರು ನಿಲ್ಲಿಸಿ ಇಳಿಯಬೇಕೆನ್ನುವಾಗ ಒಂದು ಪ್ರಾಣಿ ಹತ್ತಿರಬರುತ್ತಿರುವುದು ಗಮನಕ್ಕೆ ಗಮನಕ್ಕೆ ಬಂದಿದೆ. ಕಾರಿನಿಂದ ಇಳಿಯದೇ ಸುಮ್ಮನೆ ಕುಳಿತಿದ್ದಾಗ ಚಿರತೆ ಕಾರು ಪಕ್ಕದಲ್ಲಿಯೇ ನಡೆದುಕೊಂಡು ಹೋಗಿದೆ.
ಕಾರಿನಿಂದ ಇಳಿದು ಮನೆಗೆ ಬಂದು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ಓಡಾಟ ನಡೆಸಿರುವ ದೃಶ್ಯ ಸೆರೆಯಾಗಿದೆ. ಸಪ್ತಗರಿ ಬಡಾವಣೆ, ಜಯನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುರುಚಲ ಗಿಡಗಳಿರುವ ಖಾಲಿ ನಿವೇಶಗಳು ಹೆಚ್ಚಾಗಿದ್ದು ಚಿರತೆ ಓಡಾಟ ನಡೆಸುತ್ತವೆ ಎಂಬ ಬಗ್ಗೆ ವದಂತಿ ಮೊದಲಿಂದಲೂ ಇತ್ತು.
ಜಯನಗರದ ಮನೆಗೆ ನುಗ್ಗಿತ್ತು ಚಿರತೆ!
2018 ಜನವರಿ 20ರಂದು ತುಮಕೂರಿನ ಜಯನಗರದ ಪೊಲೀಸ್ ಠಾಣೆ ಸಮೀಪದ ಮನೆಯೊಂದರಲ್ಲಿ ಇಡೀದಿನ ಚಿರತೆ ಅವಿತುಕುಳಿತು ಜನರಲ್ಲಿ ಆತಂಕ ಹುಟ್ಟಿಸಿತ್ತು. ಮನೆಯೊಡೆಯ ರಂಗನಾಥ್ ಮನೆಗೆ ಹೋಗಿ ಬಾಗಿಲು ತೆಗೆದು ಒಳಹೋಗುವಾಗ ಚಿರತೆ ಮನೆಗೆ ನುಗ್ಗಿತ್ತು, ಎಚ್ಚೆತ್ತುಕೊಂಡು ರಂಗನಾಥ್ ಮನೆಯ ಬಾಗಿಲು ಮುಚ್ಚಿಕೊಂಡು ಹೊರಬಂದಿದ್ದರು.
ಅವರ ಪತ್ನಿ ವನಜಾಕ್ಷಿ ಹಾಗೂ ಸೊಸೆ ವಿನೂತ ಬಾತ್ರೂಂ ಸೇರಿಕೊಳ್ಳುವಂತೆ ನೋಡಿಕೊಂಡಿದ್ದರು. 6 ಗಂಟೆ ಕಾಲ ಬಾತ್ರೂಂನಲ್ಲೇ ಅತ್ತೆಸೊಸೆ ಬಂಧಿಗಳಾಗಿದ್ದರು. ಗೋಡೆ ಒಡೆದು ಕಿಟಕಿಯನ್ನೇ ತೆಗೆದು ಅಲ್ಲಿಂದ ಅವರನ್ನು ಹೊರಕರೆತರಲಾಗಿತ್ತು. ಚಿರತೆಯನ್ನು ತುಂಬಾ ಸಾಹಸಪಟ್ಟು ಸುರತವಾಗಿ ಸೆರೆಹಿಡಿಯಲಾಗಿತ್ತು. ಆರು ವರ್ಷದ ಬಳಿಕ ಜನವಸತಿ ಪ್ರದೇಶದಲ್ಲಿಯೇ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯ ಮೂಡಿಸಿದೆ.