ಪರಮೇಶ್ವರ್ ಸಿಎಂ ಆದ್ರೆ ಸಂಪೂರ್ಣ ಬೆಂಬಲ ಎಂದ ಬಿಜೆಪಿ ಶಾಸಕ

23Tmk_SureshGowda_PC
Published on

ತುಮಕೂರು: ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ ಡಾ.ಜಿ.ಪರಮೇಶ್ವರ್ ರಾಜ್ಯದ ಸಿಎಂ ಆದರೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಬಹಿರಂಗವಾಗಿ ಘೋಷಿಸಿದ್ದಾರೆ.

ಬರ ಅಧ್ಯಯನ ಪ್ರವಾಸ ಆರಂಭವಾದ ಸೋಮವಾರವಷ್ಟೇ ಜಿಲ್ಲೆಯಲ್ಲಿ ಬರ ನಿರ್ವಹಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಿಫಲರಾಗಿದ್ದಾರೆ ಎಂದು ಹರಿಹಾಯ್ದಿದ್ದ ಬಿಜೆಪಿ ಶಾಸಕರ ಹೇಳಿಕೆ ಒಂದೇ ದಿನದಲ್ಲಿ ಬದಲಾಗಿರುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.

ಮಧುಗಿರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯಲ್ಲಿಯೂ ಬಿಎಸ್‌ವೈ ಬದಲಾದಾಗ ಗೋವಿಂದ ಕಾರಜೋಳ ಅವರನ್ನು ಸಿಎಂ ಮಾಡಿ ಎಂದು ಹೇಳಿದ್ದೆ, ದಲಿತರಿಗೆ ಸಿಎಂ ಸ್ಥಾನ ಕೊಟ್ಟರೆ ರಾಜ್ಯದಲ್ಲಿ ಬಿಜೆಪಿಗೆ ಒಂದು ಶಕ್ತಿ ಬರುತ್ತೆ ಎಂದು ಸಲಹೆ ನೀಡಿದ್ದೆ ಎಂದರು.

ಸಿಎಂ ಸಿದ್ದರಾಮಯ್ಯ ಅವರು ಪರಮೇಶ್ವರ್ ಮನೆಗೆ ಹೋಗಿದ್ದನ್ನ ನೋಡಿದ್ರೆ, ಡಿಕೆಶಿಗೆ ಸಿಎಂ ಹುದ್ದೆ ಕೊಡಬಾರದು ಅಂತೇನಾದ್ರೂ ಷಡ್ಯಂತ್ರ ನಡೆಯುತ್ತಿರಬಹುದು ಎಂದು ಅನ್ನಿಸುತ್ತಿದೆ, ರಾಜ್ಯದಲ್ಲಿ ಒಕ್ಕಲಿಗರು ಸಾಕಷ್ಟು ಜನ ಸಿಎಂ ಆಗಿದ್ದಾರೆ, ದಲಿತರಿಗೂ ಒಂದು ಅವಕಾಶವಾಗಲಿ ಎಂದರು.

ಹಿAದೊಮ್ಮೆ ಡಿ.ಕೆ.ಶಿವಕುಮಾರ್ ಸಿಎಂ ಆದರೆ ಬೆಂಬಲ ಎಂದು ನೀಡಿದ್ದ ಹೇಳಿಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಸುರೇಶ್‌ಗೌಡ, ಮೊದಲ ಅವದಿಯಲ್ಲಿಯೇ ಅವರು ಸಿಎಂ ಆಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ, ಮತ್ತೆಂದು ಆಗುವುದು ಮರೀಚಿಕೆಯಷ್ಟೇ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net