ತುಮಕೂರಿಗೆ ಆಗಮಿಸಿದ ಭೀಮ ಹೆಜ್ಜೆ- 100, ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು

BJPPPP
Published on

ತುಮಕೂರು: ಡಾ.ಬಿ.ಆರ್​.ಅಂಬೇಡ್ಕರ್​ ಅವರು ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬಿದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಬೆಂಗಳೂರಿನಿಂದ ನಿಪ್ಪಾಣಿಗೆ ಹಮ್ಮಿಕೊಂಡಿರುವ ಭೀಮ ಹೆಜ್ಜೆ- 100 ರಥಯಾತ್ರೆ ಶುಕ್ರವಾರ ನಗರಕ್ಕೆ ಆಗಮಿಸಿದಾಗ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು.

ಶಾಸಕರಾದ ಬಿ.ಸುರೇಶ್​ಗೌಡ, ಜಿ.ಬಿ.ಜ್ಯೋತಿಗಣೇಶ್​, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್​.ಎಸ್​.ರವಿಹೆಬ್ಬಾಕ ನೇತೃತ್ವದಲ್ಲಿ ನಗರದ ಕ್ಯಾತಸಂದ್ರ

ಟೋಲ್​ ಬಳಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು ಬೈಕ್​ರ್ಯಾಲಿ ಮೂಲಕ ರಥಯಾತ್ರೆ ಕರೆ ತಂದರು.

ನಂತರ ಬಿಜಿಎಸ್​ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಂಸದ ಮುನಿಸ್ವಾಮಿ,

1925 ಏಪ್ರಿಲ್​ 10-11ರಂದು ಅಂಬೇಡ್ಕರ್​ ಅವರು ಶೋಷಿತ ಸಮಾಜ ಸಂಘಟಿಸಿ ಅವರನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಶೋಷಣೆಗಳಿಂದ ಮುಕ್ತಗೊಳಿಸಲು ಮೊದಲ ಬಾರಿಗೆ ಸಂಘಟಿತ ಪ್ರಯತ್ನ ಮಾಡಿದರು. ಅದರ ಸ್ಮರಣಾರ್ಥ ಭೀಮ ಹೆಜ್ಜೆ ರಥಯಾತ್ರೆ ಮಾಡಲಾಗುತ್ತಿದೆ ಎಂದರು.

ಶಾಸಕ ಬಿ.ಸುರೇಶ್​ಗೌಡ ಮಾತನಾಡಿ, ರಾಜ್ಯದ ಕಾಂಗ್ರೆಸ್​ ಸರ್ಕಾರದಲ್ಲಿ ಅಭಿವೃದ್ಧಿಗೆ ಮಿಸಲಾಗಿದ್ದ 38 ಸಾವಿರ ಕೋಟಿ ರೂ. ನುಂಗಿಹಾಕಿದೆ. ಅಭಿವೃದ್ಧಿ ನಿಗಮಗಳಿಗೂ ಬಿಡಿಗಾಸು ಕೊಟ್ಟಿಲ್ಲ. ಅಂಬೇಡ್ಕರ್​ ಹೆಸರು ಹೇಳಿಕೊಂಡು ದಲಿತರ ಮತ ಪಡೆಯುವ ಕಾಂಗ್ರೆಸ್​ ದಲಿತ ವರ್ಗದ ಏಳಿಗೆಗೆ ಏನನ್ನೂ ಮಾಡದೆ ಅನ್ಯಾಯ ಮಾಡುತ್ತಲೇ ಬಂದಿದೆ. ಅಂಬೇಡ್ಕರ್​ಗೆ ಮಾಡಿದ ಅವಮಾನವನ್ನೇ ಕಾಂಗ್ರೆಸ್​ನವರು ದಲಿತರಿಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾಂ ಅವರಿಬ್ಬರೂ ಮಹಾನ್​ ನಾಯಕರು. ಈ ನಾಯಕರು ಜೀವಂತವಾಗಿದ್ದಾಗ ಅವರನ್ನು ಅಪಮಾನಿಸಿ, ಈಗ ಅಧಿಕಾರಕ್ಕಾಗಿ ಆ ನಾಯಕರನ್ನು ಕಾಂಗ್ರೆಸ್​ನವರು ಬಳಸಿಕೊಳ್ಳುತ್ತಿದ್ದಾರೆ ಎಂದರು.

ಅಂಬೇಡ್ಕರ್​ ಅವರಿಗೆ ಬಿಜೆಪಿ ಅಂದಿನಿಂದ ಇಂದಿನವರೆಗೂ ಗೌರವಕೊಟ್ಟಿದೆ. ದಲಿತರ ಅಭಿವೃದ್ಧಿಗೆ ನರೇಂದ್ರ ಮೋದಿವರ ಸರ್ಕಾರ ಕಟಿಬದ್ಧವಾಗಿದೆ. ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನದ ನೂರನೇ ವರ್ಷದ ನೆನಪು ಮಾಡಿಕೊಂಡ ಕಾಂಗ್ರೆಸ್​ ನವರಿಗೆ ಅಂಬೇಡ್ಕರ್​ ಅವರು ನಿಪ್ಪಾಣಿಗೆ ಬಂದ ನೂರು ವರ್ಷದ ನೆನಪು ಮಾಡಿಕೊಳ್ಳಲಿಲ್ಲ, ಅಧಿವೇಶನದಲ್ಲಿ ಬಿಜೆಪಿ ಶಾಸಕರು ಸರ್ಕಾರಕ್ಕೆ ನೆನಪು ಮಾಡಿದರೂ ಕಾಂಗ್ರೆಸ್​ನವರಿಗೆ ಅಂಬೇಡ್ಕರ್​ ಬೇಕಾಗಿರಲಿಲ್ಲ ಎಂದರು.

ಜಿಲ್ಲಾ ಬಜೆಪಿ ಹಿರಿಯ ಉಪಾಧ್ಯಕ್ಷ ವೈ.ಹೆಚ್​.ಹುಚ್ಚಯ್ಯ ಮಾತನಾಡಿ, ಕಾಂಗ್ರೆಸ್​ನವರು ಅಂಬೇಡ್ಕರ್​ ಅವರನ್ನು ಅಪಮಾನ ಮಾಡಿದ ಬಗ್ಗೆ ಬಿಜೆಪಿ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಜನರಿಗೆ ತಿಳಿಸುತ್ತಾ ಬಂದಿದೆ. ನೂರು ವರ್ಷಗಳ ಹಿಂದೆಅಂಬೇಡ್ಕರ್​ ಅವರು ನಿಪ್ಪಾಣಿಯಲ್ಲಿ ಹಿತಕಾರಿಣಿ ಸಭಾದ ಅಧಿವೇಶನದಲ್ಲಿ ಭಾಗವಹಿಸಿದ್ದರು. ಶಿಕ್ಷಣ ಮತ್ತು ವಸತಿ ಶಾಲೆಯ ಬಗ್ಗೆ ಮಾತನಾಡಿದ್ದರು. ಈ ಐತಿಹಾಸಿಕ ಭೀಮ ಹೆಜ್ಜೆಗೆ ಶತಮಾನದ ಸಂಭ್ರಮ ಆಚರಿಸಲಾಗುತ್ತಿದೆ ಎಂದರು.

ಕಾಂಗ್ರೆಸ್​ ಸರ್ಕಾರದಲಿತ ವರ್ಗಕ್ಕೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರುತ್ತಿದೆ. ದಲಿತರ ಅಭಿವೃದ್ಧಿಗೆ ಮಿಸಲಾದ ಹಣವನ್ನು ತನ್ನ ಗ್ಯಾರಂಟಿ ಯೋಜನೆಗಳಿಗೆ ಬಳಸಿ ಅನ್ಯಾಯ ಮಾಡಿದೆ. ತುಮಕೂರು ಜಿಲ್ಲೆಯಲ್ಲಿ ದಲಿತರಿಗೆ ಮೀಸಲಾದ 89 ಕೋಟಿ ರೂ. ಸರ್ಕಾರಕ್ಕೆ ವಾಪಸ್​ ಹೋಗಿದೆ. ದಲಿತರ ಉದ್ಧಾರ ಮಾಡುತ್ತೇನೆ ಎಂದು ಹೇಳಿಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದರು.

ನಂತರ ಬೈಕ್​ರ್ಯಾಲಿ ಮೂಲಕ ಭೀಮ ಹೆಜ್ಜೆ ರಥಯಾತ್ರೆಯನ್ನು ಶಿರಾ ಮಾರ್ಗವಾಗಿ ಬೀಳ್ಕೊಡಲಾಯಿತು.

ಎಸ್​.ಸಿ.ಮೋರ್ಚಾ ರಾಜ್ಯ ಅಧ್ಯಕ್ಷ ಸಿಮೆಂಟ್​ ಮಂಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌದಾಲ್​, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್​ ಹೆಬ್ಬಾಕ, ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಹೆಚ್​.ಎ.ಆಂಜನಪ್ಪ, ಮುಖಂಡರಾದ ಬಿ.ಹೆಚ್​.ಅನಿಲ್​ ಕುಮಾರ್​, ಮಾಜಿ ಮೇಯರ್​ ಬಿ.ಜಿ.ಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ನಗರ ಅಧ್ಯಕ್ಷ ಧನುಷ್​, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್​, ಮುಖಂಡ ಟಿ.ಹೆಚ್​.ಹನುಮಂತರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net