

ತುಮಕೂರು: ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಂಗಳವಾರ ಜಿಲ್ಲೆಯ ಗುಬ್ಬಿ ಪಟ್ಟಣದ ಬೆಂಚಗೆರೆ ರೈಲ್ವೇ ಗೇಟ್ ಬಳಿ ನಿಮಾರ್ಣ ಮಾಡಲು ಉದ್ದೇಶಿಸಿರುವ ರೈಲ್ವೆ ಮೇಲ್ಸೇತುವೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ರೈಲು ಚಲಿಸುವಾಗ ರೈಲ್ವೆ ಗೇಟ್ ಮುಚ್ಚುವುದರಿಂದ ಸುಮಾರು 2 ಕಿಮೀ ನಷ್ಟು ವಾಹನ ದಟ್ಟಣೆ ಉಂಟಾಗಿ ವಾಹನ ಸಂಚಾರ ಸಮಸ್ಯೆ ಎದುರಾಗಿದೆ ಎಂದು ಸ್ಥಳಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತ್ವರಿತವಾಗಿ ಸೇತುವೆ ನಿಮಾರ್ಣ ಪ್ರಾರಂಭವಾಗಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಸೇತುವೆ ನಿಮಾರ್ಣ ಮಾಡಲು ಉದ್ದೇಶಿಸಲಾಗಿದೆ. ಸೇತುವೆ ನಿಮಾರ್ಣಕ್ಕಾಗಿ ಒಟ್ಟು 1.6 ಎಕರೆ ಭೂಸ್ವಾಧಿನ ಅಗತ್ಯವಿದೆ, ಆದಷ್ಟು ಬೇಗ ಭೂಸ್ವಾಧಿನಪಡಿಸಿಕೊಂಡು ಭೂಮಾಲೀಕರಿಗೆ ಪರಿಹಾರ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಶೀಘ್ರ ಭೂಸ್ವಾಧಿನ ಪ್ರಕ್ರಿಯೆ ಮುಗಿಸಿ, ಕಾಮಗಾರಿಗೆ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಥಳಿಯರಿಗೆ ಭರವಸೆ ನೀಡಿದರು.ವಿಶೇಷ ಭೂಸ್ವಾಧಿನ ಅಧಿಕಾರಿ ರೇಣುಕಾಪ್ರಸಾದ್ ಜಂಬಗಿ, ಭೂಮಾಪನ ಮೇಲ್ವಿಚಾರಕ ಕೃಷ್ಣಕುಮಾರ್, ಗುಬ್ಬಿ ತಾಲೂಕು ತಹಸೀಲ್ದಾರ್ ಬಿ.ಆರತಿ, ರೈಲ್ವೆ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ್ ಸಾಯಿ ಮತ್ತಿತರರು ಇದ್ದರು.