

ತುಮಕೂರು: ದೇಶದಲ್ಲಿ ಹಿಂದಿ ಭಾಷೆಗೆ ದೊರೆಯುತ್ತಿರುವ ವಿಶೇಷ ಪ್ರಾಶಸ ಇತರೆ ಪ್ರಾದೇಶಿಕ ಭಾಷೆಗಳಿಗೆ ಸಿಗದಿರುವುದು ವಿಪರ್ಯಾಸ. ರಾಷ್ಟ್ರದ ಎಲ್ಲಾ ಭಾಷೆಗಳು ಸಮಾನವೆನ್ನಲು ರಾಷ್ಟ್ರೀಯ ಭಾಷಾ ನೀತಿ ರಚನೆಯಾಗಬೇಕೆಂಬ ಹೋರಾಟ ನಮ್ಮದು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.
ಜಿಲ್ಲಾಡಳಿತ ವತಿಯಿಂದ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು-ನುಡಿ ಕುರಿತು ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿ ಭಾಷೆ ರಾಷ್ಟ್ರ ಭಾಷೆಯಲ್ಲ, ಹಿಂದಿಯಂತೆ ಕನ್ನಡಕ್ಕೂ ಪ್ರಾಶಸ್ತ್ಯ ದೊರೆಯಬೇಕು. ಕನ್ನಡಕಷ್ಟೆ ಅಲ್ಲದೆ, ದೇಶದ ಇತರೆ ರಾಜ್ಯಗಳ ಭಾಷೆಗಳಿಗೂ ಪ್ರಾಶಸ್ತ್ಯ ದೊರೆಯಬೇಕು ಎಂದರು.
ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು, ಇದಕ್ಕಾಗಿ ರಾಷ್ಟ್ರೀಯ ಉದ್ಯೋಗ ನೀತಿ ರಚನೆಯಾಗಬೇಕು, ಇಲ್ಲದೆ ಹೋದರೆ ಎಲ್ಲ ರಾಜ್ಯ ಭಾಷೆಗಳು 2ನೇ ಹಾಗೂ 3ನೇ ದರ್ಜೆಯಲ್ಲಿಯೇ ಉಳಿಯಬೇಕಾದ ದುಸ್ಥಿತಿಗೆ ತಲುಪಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಕ್ಕೆ 2008ರ ನವೆಂಬರ್ 1ರಂದು ಶಾಸ್ತ್ರೀಯ ಸ್ಥಾನಮಾನ ನೀಡಿದ್ದರೂ ಸಹ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಪ್ರತ್ಯೇಕ ಸಂಸ್ಥೆ ಸ್ಥಾಪಿಸಲು ಈವರೆಗೂ ಸಾಧ್ಯವಾಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ತಮಿಳುನಾಡಿನಲ್ಲಿ ಇಂತಹದೊಂದು ಪ್ರತ್ಯೇಕ ಸಂಸ್ಥೆ ಸ್ಥಾಪಿಸಲಾಗಿದೆ. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಅನುಮತಿ ಪಡೆದು ಕನ್ನಡದ ಪ್ರತ್ಯೇಕ ಶಾಸ್ತ್ರೀಯ ಭಾಷಾ ಸಂಸ್ಥೆ ಸ್ಥಾಪನೆಗೆ ಮುಂದಾಗಬೇಕು ಎಂದು ಎಂದರು.
ಪ್ರತ್ಯೇಕ ಶಾಸ್ತ್ರೀಯ ಭಾಷಾ ಸಂಸ್ಥೆ ಸ್ಥಾಪನೆಯಿಂದ ರಾಜ್ಯ ಭಾಷೆಗಳು ಮತ್ತಷ್ಟು ಬಲಗೊಳ್ಳಲು ಸಾಧ್ಯವಿದೆ, ನ್ನಡ ಭಾಷೆಯ ಹಿರಿಮೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯಾವುದೇ ಉದಾಸೀನ ಮಾಡದೆ ಕರ್ನಾಟಕ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದರು.