

ತುಮಕೂರು: ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಲಭ್ಯವಿದ್ದರೂ ಗೊಬ್ಬರದ ಅಂಗಡಿಗಳಲ್ಲಿ ಕೃತರ ಅಭಾವ ಸೃಷ್ಠಿಸಿರುವುದು ಜಿಲ್ಲಾದ್ಯಂತ ರೈತರಲ್ಲಿ ಆತಂಕ ಮೂಡಿಸಿದೆ. ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು ಬೆಳೆಗೆ ಯೂರಿಯಾ ಹಾಕಲು ರೈತರು ಒಮ್ಮೆಲೆ ಮುಗಿಬೀಳುತ್ತಿರುವುದು ವ್ಯಾಪಾರಿಗಳು ಲಾಭಕ್ಕೆ ಬಳಸಿಕೊಳ್ಳಲು ದಾರಿಯಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಕಾಲಕ್ಕೆ 64990 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು 85351 ಮೆಟ್ರಿಕ್ ಟನ್ ದಾಸ್ತಾನು ಮಾಡಿಕೊಳ್ಳಲಾಗಿದೆ, ಯೂರಿಯಾ ಕೂಡ 5165 ಮೆಟ್ರಿಕ್ ಟನ್ ಲಭ್ಯವಿದ್ದು ರೈತರು ಗೊಬ್ಬರದ ಬಗ್ಗೆ ಆತಂಕಗೊಳ್ಳದೆ ತಾಳ್ಮೆಯಿಂದ ಸರ್ಕಾರಿ ನಿಗದಿಗೊಳಿಸಿರುವ ದರದಲ್ಲಿಯೇ ಗೊಬ್ಬರ ಖರೀದಿಸಬೇಕು ಎಂದು ಕೃಷಿ ಇಲಾಖೆ ಮನವಿ ಮಾಡಿದೆ.
ರಾಗಿ, ಮೆಕ್ಕೆಜೋಳ, ತೊಗರೆ, ಅಲಸಂದೆ, ಶೇಂಗಾ ಸೇರಿದಂತೆ ವಿವಿಧ ಮುಂಗಾರು ಬಳೆಗೆ ಮಳೆ ಸುರಿದ ಸಂದರ್ಭದಲ್ಲಿ ಯೂರಿಯಾ ಕೊಡುವುದು ರೈತರು ಅಭ್ಯಾಸ ಮಾಡಿಕೊಂಡಿದ್ದು ಸಕಾಲದಲ್ಲಿ ಗೊಬ್ಬರ ನೀಡದಿದ್ದರೆ ಮಣ್ಣಿನ ಲವತ್ತತೆ ಕಳೆದುಕೊಂಡಿರುವ ಹೊಲಗಳಲ್ಲಿ ಬೆಳೆ ಮೇಲೇಳದೆ ಹಾಳಾಗುವ ಭಯದಿಂದ ರೈತರು ಯೂರಿಯಾಗಾಗಿ ಮುಗಿಬಿದ್ದಿದ್ದಾರೆ.
ಕೆಲವು ರೈತರು ಭವಿಷ್ಯದಲ್ಲಿ ಯೂರಿಯಾ ಸಿಗದಿದ್ದರೆ ಎಂಬ ಭ್ರಮೆಯಿಂದ ಹೆಚ್ಚಿನ ಪ್ರಮಾಣದ ಯೂರಿಯಾ ಖರೀದಿಸಿ ಮನೆಯಲ್ಲಿಟ್ಟುಕೊಳ್ಳುವ ದುಸ್ಸಾಹ ಕೂಡ ಯೂರಿಯಾಗೆ ಬೇಡಿಕೆ ಹೆಚ್ಚಿಸಿದೆ. ಆದರೆ, ಈಗಾಗಲೇ ಉತ್ತರ ಕರ್ನಾಟಕದ ಕಡೆಗಳಲ್ಲಿ ಯೂರಿಯಾ ಬೇಡಿಕೆ ಕಡಿಮೆಯಾಗಿದ್ದು ದಣದ ಜಿಲ್ಲೆಗಳ ಬೆಳೆಗಳಿಗೆ ಸಾಕಾಷ್ಟುವಷ್ಟು ಯೂರಿಯಾ ಹರಿದುಬರಲಿದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೃಷಿ, ತೋಟಗಾರಿಕೆ ಇಲಾಖೆ ಮಾಡಬೇಕಿದೆ.
ಜಿಲ್ಲೆಯ ಪ್ರಮುಖ ಬೆಳೆ ಎನ್ನಿಸಿಕೊಂಡಿರುವ ರಾಗಿ ಬಿತ್ತನೆ ಕೂಡ ನಿರೀತ ಗುರಿ ತಲುಪಿಲ್ಲ, ಜಿಲ್ಲೆಯಲ್ಲಿ 1.51 ಹೆ. ಭೂಮಿಯಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆಯಾದರೂ ಈವರೆಗೂ ಕೇವಲ 50 ಸಾವಿರ ಹೆ. ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ1.65ಲಕ್ಷ ಹೆ. ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿತ್ತು. ಈ ವರ್ಷ ಇನ್ನೂ ಬಿತ್ತನೆ ನಡೆಯುತ್ತಿರುವ ಕಾರಣದಿಂದ ಯೂರಿಯಾಗೆ ಈವರೆಗೂ ಅಭಾವವಿಲ್ಲ, ರೈತರು ಭಯಗೊಳ್ಳದೆ ತಾಳ್ಮೆಯಿಂದ ನ್ಯಾಯವಾದ ಬೆಲೆಗೆ ಯೂರಿಯಾ ಖರೀದಿಸಬೇಕಿದೆ.
ಮಧುಗಿರಿ, ಶಿರಾ, ತುಮಕೂರು, ಕೊರಟಗೆರೆ, ಗುಬ್ಬಿ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಆಗಸ್ಟ್ ಮೊದಲವಾರದಲ್ಲಿಯೂ ಬಿತ್ತನೆ ನಡೆಯುತ್ತಲೇ ಇದೆ. ಆ.5 ಹಾಗೂ 6ರಂದು ಎಲ್ಲೆಡೆಯೂ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಮುಂದಿನ ಒಂದೆರದು ವಾರಗಳ ಕಾಲ ಬಿತ್ತನೆ ನಡೆಯುತ್ತಲೇ ಇರುತ್ತದೆ.
ಆಂಧ್ರದ ಸಂಬಂಧಿಕರ ಮೊರೆಹೋದ ಪಾವಗಡ ರೈತರು! ಪಾವಗಡ ತಾಲೂಕಿನಲ್ಲಿ ಯೂರಿಯಾಗೆ ಅತಿಯಾದ ಬೇಡಿಕೆ ಸೃಷ್ಠಿಯಾಗಿದೆ, 258ದರಕ್ಕೆ ಸಿಗುವ ಮೂಟೆ ಯೂರಿಯಾ ಮಂಗಳವಾಡ, ಕೊತ್ತೂರು, ಚನ್ನಕೇಶವಪುರ ಕಾಳಸಂತೆಯಲ್ಲಿ 400ರೂ. ಗೆ ಮಾರಾಟವಾಗುತ್ತಿದೆ. ಮೆಕ್ಕೆಜೋಳ, ಶೇಂಗಾ, ರಾಗಿಗೆ ಅಗತ್ಯವಾದ ಯೂರಿಯಾ ಕೊಂಡುಕೊಳ್ಳಲು ರೈತರು ತೋರುತ್ತಿರುವ ಉತ್ಸಾಹ ದಂಧೆಕೋರರಿಗೆ ವರದಾನವಾಗಿದೆ. ಮಳೆ ಕೊರತೆಯಿಂದ ಈ ವರ್ಷ ಬಿತ್ತನೆ ಕಡಿಮೆಯಾಗಿರುವ ಆಂಧ್ರದ ಸಂಬಂಧಿಕರ ಆಧಾರ್ ಕಾರ್ಡ್ ಪಡೆದು ನೆರೆಯ ರಾಜ್ಯದಿಂದ ಚೀಲಕ್ಕೆ 300ರೂ. ನೀಡಿ ಗೊಬ್ಬರ ತರುತ್ತಿದ್ದಾರೆ. ಆಂಧ್ರದಲ್ಲಿ ಒಬ್ಬ ರೈತನಿಗೆ 2 ಮೂಟೆ ಗೊಬ್ಬರ ನೀಡಲಾಗುತ್ತಿದ್ದು ಅಲ್ಲಿನ ಸಂಬಂಧಕರಿಗೆ ಜಿಲ್ಲೆಯ ರೈತರು ಮೊರೆಯಿಡುತ್ತಿದ್ದಾರೆ.
ಯೂರಿಯಾ ಜತೆ ಬೇರೆ ಗೊಬ್ಬರಿ ಖರೀದಿಸಬೇಕು: ಜುಲೈನಲ್ಲಿ ಜಿಲ್ಲೆಯಲ್ಲಿ ಶೇ.17ರಷ್ಟು ಮಳೆ ಕೊರತೆಯಾದ ಕಾರಣದಿಂದ ಈವರೆಗೂ ಬಿತ್ತನೆ ಪ್ರಮಾಣ ಶೇ.40 ದಾಟಿಲ್ಲ. ಆದರೂ, ಗೊಬ್ಬರ ಮಾರಾಟದ ಏಜೆನ್ಸಿ ಪಡೆದಿರುವ ಮಾರಾಟಗಾರರು ಯೂರಿಯಾಗೆ ಕೃತಕ ಅಭಾವ ಸೃಷ್ಠಿಸಿಕೊಂಡು ರೈತರನ್ನು ಭಯಗೊಳಿಸಿ ಸುಲಿಗೆ ಮಾಡಲು ಮುಂದಾಗಿದ್ದಾರೆ, ಸಬ್ಸಿಡಿಗಾಗಿ ಕಾಯಲಾಗದ ಕೆಲವು ದೊಡ್ಡ ಏಜೆನ್ಸಿಗಳು ಯೂರಿಯಾ ಮಾರಾಟವನ್ನೇ ನಿಲ್ಲಿಸಿದ್ದಾರೆ. ಇನ್ನುಳಿದವರು ಯೂರಿರಾ ಬೇಕಾದರೆ ಬೇರೆ ಔಷಧ, ಕಾಂಪ್ಲೆಕ್ಸ್, ಡಿಎಪಿ. ಪೊಟ್ಯಾಷ್ ಗೊಬ್ಬರಗಳನ್ನು ಖರೀದಿಸಬೇಕು ಎಂದು ಒತ್ತಡ ಹಾಕಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಸ್ವಂತ ವಾಹನಗಳಿರುವ ರೈತರು ದೂರದೂರುಗಳಿಂದ ಕಾಳಸಂತೆಯಲ್ಲಿಯೇ ಯೂರಿಯಾ ಖರೀದಿ ಮನೆಯಲ್ಲಿಟ್ಟುಕೊಳ್ಳುತ್ತಿದ್ದಾರೆ, ಸಣ್ಣ, ಪುಟ್ಟ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ.
ಕೋಟ್... ಜಿಲ್ಲೆಯಲ್ಲಿ ರೈತರಿಗೆ ಸಾಕಷ್ಟುವಷ್ಟು ಯೂರಿಯಾ ಸೇರಿದಂತೆ ಎಲ್ಲಾ ರಸಗೊಬ್ಬರ ಕೂಡ ಲಭ್ಯವಿದೆ, ಮಳೆ ಬಿದ್ದಾಗ ಸರಬರಾಜು ಮಾಡುವ ಉದ್ದೇಶದಿಂದ ಗೋದಾಮಿನಲ್ಲಿ ಶೇಖರಿಸಿದಲಾಗಿದ್ದು ಬೇಡಿಕೆ ಬಂದ ಕಡೆ ಕಳುಹಿಸಲಾಗುತ್ತಿದೆ. ರೈತರು ಯೂರಿಯಾ ಕೊರತೆಯಾಗಿದೆ ಎಂಬ ಸಮೂಹಸನ್ನಿಗೆ ಒಳಗಾಗದೆ ಅಧಿಕೃತ ಮಾರಾಟಗಾರರಿಂದ ಯೂರಿಯಾ ಖರೀದಿಸಬೇಕು. ಹೆಚ್ಚು ದರ ಪಡೆದರೆ ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಬೇಕು. ಡಾ.ರಮೇಶ್ ಜಂಟಿ ಕೃಷಿ ನಿರ್ದೇಶಕ, ತುಮಕೂರು
ಜಿಲ್ಲೆಗೆ ಈವರೆಗೂ ಯೂರಿಯಾ ಸೇರಿ ವಿವಿಧ ರಸಗೊಬ್ಬರಗಳು ಸೇರಿ ಒಟ್ಟು 64900 ಮೆ.ಟನ್ ಬೇಡಿಕೆಯಿದ್ದು ಆರಂಭಿಕವಾಗಿ ಬಂದ 34523 ಮೆಟ್ರಿಕ್ ಟನ್ ಸೇರಿದಂತೆ ಈವರೆಗೂ 85351 ಮೆ.ಟನ್ ರಸಗೊಬ್ಬರ ತಯಾರಕರಿಂದ ಜಿಲ್ಲೆಗೆ ಸರಬರಾಜಾಗಿದೆ. 61552 ಮೆ.ಟನ್ ಜಿಲ್ಲೆಯ ಎಲ್ಲಾ ತಾಲೂಕುಗಳ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ವಿತರಣೆಯಾಗಿದೆ. ಇನ್ನುಳಿದಿರುವ 23799 ಮೆ.ಟನ್(ಯೂರಿಯಾ&5165, ಡಿಎಪಿ 2311, ಎಂಒಪಿ 1677, ಸಂಯುಕ್ತ ಗೊಬ್ಬರ 14143 ಮತ್ತು ಎಸ್ಎಸ್ಪಿ 571ಟನ್) ಜಿಲ್ಲೆಯ ಚಿಲ್ಲರೆ ಹಾಗೂ ಸಗಟು ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಅಗತ್ಯವಾದ ಎಲ್ಲಾ ವಿಧದ ಗೊಬ್ಬರ ಎಲ್ಲಿಯೂ ಕೊರೆತೆಯಾಗದಂತೆ ಲಭ್ಯವಿದೆ ಎಂದು ಕೃಷಿ ಇಲಾಖೆ ರೈತರಿಗೆ ಭರವಸೆ ನೀಡಿದೆ.