ತುಮಕೂರು ಅಮಾನಿಕೆರೆ ಕೋಡಿ

Amanikere
Published on

ತುಮಕೂರು: ನಗರದಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಿಗ್ಗೆಯಿಂದ ಸುರಿದ ಭಾರೀ ಮಳೆಗೆ ತುಮಕೂರು ಅಮಾನಿಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ.

ಕಳೆದ 3 - 4 ದಿನಗಳಿಂದ ನಗರ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮಾನಿಕೆರೆಯ ಒಳ ಹರಿವು ಹೆಚ್ಚಾಗಿತ್ತು. ತಡರಾತ್ರಿ ಮತ್ತು ಬೆಳಗ್ಗೆ 7 ರಿಂದ 8.30ರವರೆಗೆ ಸುಮಾರು ಒಂದೂವರೆ ಗಂಟೆ ಭರ್ಜರಿ ಮಳೆಯಾಗಿದ್ದರಿಂದ ತುಮಕೂರು ಅಮಾನಿಕೆರೆ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿದೆ. ಅಮಾನಿಕೆರೆ ಕೋಡಿ ಬಿದ್ದು ಹರಿಯುತ್ತಿರುವುದರಿಂದ ನಗರ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

ರಸ್ತೆ ಬಂದ್​ : ತುಮಕೂರು ಅಮಾನಿಕೆರೆ ಕೋಡಿ ಸೇತುವೆ ನಿಮಾರ್ಣ ಕಾರ್ಯ ಪ್ರಗತಿಯಲ್ಲಿರುವುದರಿಂದ ನಗರದಿಂದ ಶಿರಾ, ಮಧುಗಿರಿ ಕಡೆ ತೆರಳಲು ದ್ವಿಚಕ್ರ ವಾಹನ ಹಾಗೂ ಲುವಾಹನಗಳಿಗೆ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯನ್ನು ಕೆರೆ ಕೋಡಿ ನೀರು ಹರಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಂದ್​ ಮಾಡಲಾಗಿದೆ.

ಅಮಾನಿಕೆರೆ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಕೆರೆಯ ಕೋಡಿಯ ಪಕ್ಕದಲ್ಲಿ ವಾಸವಿರುವ ಸುಮಾರು 24 ಕುಟುಂಬಗಳ ಸ್ಥಳಾಂತರಕ್ಕೆ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಸೂಚನೆ ಮೇರೆಗೆ ಉಪ ಆಯುಕ್ತ ಗಿರೀಶ್​, ಲೋಕೋಪಯೋಗಿ ಇಲಾಖೆ ಇಂಜಿನಿಯರ್​ ರವಿಕುಮಾರ್​ ಮತ್ತು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಯಲ್ಲೋ- ಅರ್ಲಟ್​ ಘೋಷಣೆ ಮಾಡಲಾಗಿತ್ತು. ಹೀಗಾಗಿ ಅಧಿಕಾರಿಗಳು ಕಾರ್ಯನ್ಮೋಖರಾಗಿದ್ದು, ಬೆಳ್ಳಂಬೆಳಿಗ್ಗೆ ಸುರಿದ ಮಳೆಯಿಂದಾಗಿ ಕೆರೆ ಮೈದುಂಬಿ ಹರಿಯುತ್ತಿರುವ ಸ್ಥಳಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಯಾರೊಬ್ಬರು ಕೆರೆಯ ಕೋಡಿ ಬಳಿ ತೆರಳಿ ಹರಿಯುತ್ತಿರುವ ನೀರನ್ನು ವೀಕ್ಷಿಸದಂತೆ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net