ಎಬಿವಿಪಿ ರಾಜ್ಯಮಟ್ಟದ ಕಾರ್ಯಗಾರ; ಶೈಕ್ಷಣಿಕ ಸಂಶೋಧಕರ ಸಮಾಗಮ

ABVPPPPP
Published on

ತುಮಕೂರು: ದೇಶದ ಬಗ್ಗೆ ಎಲ್ಲರೂ ಆಲೋಚಿಸಬೇಕು, ದೇಶಕ್ಕಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಾಂತ ಪ್ರಮುಖರಾದ ರಾಮಚಂದ್ರ ಶೆಟ್ಟಿ ಹೇಳಿದರು.

ತಿಪಟೂರು ತಾಲೂಕು ಸುಕ್ಷೇತ್ರ ಕೆರೆಗೋಡಿ ರಂಗಾಪುರ ಮಠದಲ್ಲಿ ಎಬಿವಿಪಿ ಆಯೋಜಿಸಿರುವ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಎರಡು ದಿನಗಳ ಕಾರ್ಯಗಾರದಲ್ಲಿ ಮಾತನಾಡಿದರು.

ಸಂಶೋಧನೆಗೆ ಏನು ಬೇಕು ಎಂಬ ಕುತೂಹಲ ನಾವು ಕಳೆದುಕೊಂಡಿದ್ದೇವೆ ಸಂಶೋಧಕರು ಹೊಸ ದೃಷ್ಟಿಕೋನದಲ್ಲಿ ಎಲ್ಲವನ್ನು ನೋಡವುದನ್ನ ಕಲಿತರೆ ಸಮಾಜದ ಅಭಿವೃದ್ಧಿಗೆ ಪೂರಕವಾದ ಆವಿಷ್ಕಾರಗಳನ್ನು ಕೊಡುಗೆಯಾಗಿ ನೀಡುವುದಕ್ಕೆ ಸಾಧ್ಯವಿದೆ ಎಂದರು.

ಕೇಂದ್ರೀಯ ವಿವಿ ಅಧ್ಯಾಪಕ ಪ್ರೊ.ನಾಗಲಿಂಗಮ್ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರಂಭವಾಗಿ 75 ವರ್ಷಗಳಾಗಿದ್ದು ಹಲವು ಆಯಾಮಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಉತ್ತಮ ಗೊಳಿಸಲು ಸಹಕರಿಸಿದೆ ಎಂದರು.

ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಚಿಂತಿಸಲು ಸಹ ಸಹಾಯವಾಗಿದೆ. ಎಬಿವಿಪಿ ತನ್ನ ಕಾರ್ಯಕರ್ತರಿಗೆ ಉತ್ತಮ ನಾಯಕತ್ವಗುಣ ಜತೆಗೆ ಸಮಾಜಮುಖಿ, ದೇಶಹಿತದ ಕಾಯಕದಲ್ಲಿ ತೊಡಗಿಸಿಕೊಳ್ಳಲು ಪ್ರೇರಕವಾಗಿದೆ ಹಾಗಾಗಿ, ನಮ್ಮ ಕಾರ್ಯಕರ್ತರನ್ನು ಸಾಮಾಜದಲ್ಲಿ ನೋಡುವ ರೀತಿ ಕೂಡ ಬದಲಾಗಿದೆ ಎಂದರು.

ಉದ್ಯಮಿ ಡಾ.ಆರ್.ಎಲ್.ರಮೇಶ್‌ಬಾಬು ಮಾತನಾಡಿ, ಎಲ್ಲಾ ಕ್ಷೇತ್ರದಲ್ಲೂ ಬೆಳವಣಿಗೆಯಾದರೆ ಮಾತ್ರ ದೇಶ ಉನ್ನತ ಸ್ಥಾನಕ್ಕೆ ತಲುಪುತ್ತದೆ. ನಮ್ಮ ಆಲೋಚನೆ ದೊಡ್ಡದಾಗಿದ್ದಾಗ ಮಾತ್ರ ನಾವು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ, ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಮಟ್ಟದ ಗುರಿ ಇಟ್ಟುಕೊಂಡು ಸಂಶೋಧಕನಾಗಬೇಕು ಎಂದರು.

ಎಬಿವಿಪಿ ರಾಜ್ಯ ಉಪಾಧ್ಯಕ್ಷ ಡಾ.ಅಜಯಕುಮಾರ್, ರಾಜ್ಯ ಕಾರ್ಯದರ್ಶಿ ಎಚ್.ಕೆ.ಪ್ರವೀಣ್ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರು ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net