

ತುಮಕೂರು:ನಗರದ ಸರ್ಕಾರಿ ಪದವಿ ಕಾಲೇಜು ಇಕೊ-ಕ್ಲಬ್ ಮತ್ತು ಡಬ್ಲೂಎಫ್ವಿ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಪರಿಸರ ಕಾಳಜಿಯ ಭಾಗವಾಗಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರ ಮತ್ತು ನೀರಿನ ತೊಟ್ಟಿಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಡಬ್ಲೂಎಫ್ವಿ(ವಾಟರ್ ಫಾರ್ ವಾಯಿಸ್ಲೈಸ್ ಫೌಂಡೆಶನ್) ಸಂಸ್ಥಾಪಕ ಜೈನ್ ಸನ್ನಿ ಹಸ್ತಿಮಲ್, ಮೂಕ ಪ್ರಾಣಿಗಳು ಮತ್ತು ಪಕ್ಷಿಗಳು ಕುಡಿಯುವ ನೀರಿನ ಅವಶ್ಯಕತೆ ಮತ್ತು ಅದನ್ನು ಒದಿಗಿಸುವ ಜನರ ಪಾತ್ರ ಕುರಿತು ವಿಡಿಯೋ ಸಂವಾದದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಂಸ್ಥೆಯಿಂದ ಕುಡಿಯುವ ನೀರಿನ ತೊಟ್ಟಿಗಳನ್ನು ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಮತ್ತು ಕಾಲೇಜಿಗೆ ನೀಡಲಾಯಿತು.
ನೀರಿನ ತೊಟ್ಟಿಗಳಿಗೆ ತೃತೀಯ ಬಿಎಸ್ಸಿ ವಿದ್ಯಾರ್ಥಿಗಳಿಂದ ಪರಿಸರ ಕಾಳಜಿ ಸೂಚಿಸುವ ಭೀತ್ತಿ ಚಿತ್ರಗಳನ್ನು ಬಿಡಿಸಿ ಈ ಕಾರ್ಯಕ್ರಮದ ಮಹತ್ವ ಸಾರಿದರು.
ಪ್ರಾಚಾಯೆರ್ ಪ್ರೊ.ಟಿ.ಡಿ.ವಸಂತ ಮಾತನಾಡಿ, ಅವಶ್ಯಕತೆ ಇರುವ ಮೂಕ ಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಒದಗಿಸುವ ಮೂಲಕ ಪ್ರಾಣಿ-ಜೀವ ಸಂಕುಲ ಉಳಿಸಿ ಪರಿಸರ ಸಮತೋಲನ ಕಾಪಾಡಬೇಕು ಎಂದರು. ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಈ ಕಾರ್ಯಕ್ಕೆ ಸಂಬಂಧಿಸಿದ ಪ್ರತಿಜ್ಞಾ ವಿಧಿ ಬೋಧಿಸಿದರು.
ಐಕ್ಯೂಎಸಿ ಸಂಯೋಜಕಿ ಡಾ.ಕೆ.ವಿ.ಅನಸುಯಾ ಮಾತನಾಡಿದರು. ವಿಜ್ಞಾನ ವೇದಿಕೆ ಸಂಚಾಲಕ ಡಾ.ಎಂ.ವೆಂಕಟರವಣಪ್ಪ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎನ್.ಯೋಗೇಶ್, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಫಾತಿಮಾ-ತು- ಜೋಹರಾ-ಜಬೀನ್, ಇಕೊ-ಕ್ಲಬ್ ಸಂಚಾಲಕಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಭವಾನಿ ಪಾಟೀಲ್ ಮತ್ತಿತರರು ಇದ್ದರು.