

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಮಾರ್ಗೋನಹಳ್ಳಿ ರೈತ ಸಿದ್ದಯ್ಯ(90) ತೆಂಗಿನ ಸಸಿಗೆ ಹತ್ತಿಕೊಂಡಿದ್ದ ಬೆಂಕಿ ನಂದಿಸುವ ವೇಳೆ ಆಕಸ್ಮಿಕವಾಗಿ ಬೆಂಕಿಯವಘಡಕ್ಕೀಡಾಗಿ ಭಾನುವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ರೈತ ಸಿದ್ದಯ್ಯ ಮಧ್ಯಾಹ್ನ ಊಟವಾದ ಮೇಲೆ ದೊಡ್ಡಮಾರ್ಗೋನಹಳ್ಳಿ ಹೊರ ವಲಯದ ತೋಟಕ್ಕೆ 4 ಗಂಟೆಗೆ ತೆರಳಿದ್ದಾನೆ. ತೋಟದ ಬದುವಿನಲ್ಲಿ ಇದ್ದ ಹುಲ್ಲನ್ನು ಕಳೆಯಲು ಬೆಂಕಿ ಹಾಕಿದ್ದಾನೆ ಎನ್ನಲಾಗಿದೆ. ಆ ಬೆಂಕಿ ಕ್ರಮೇಣ ಉರಿದುಕೊಂಡು ಬದುವಿನ ಪಕ್ಕದಲ್ಲಿದ್ದ ತೆಂಗಿನ ಸಸಿಗೆ ಹತ್ತಿಕೊಂಡು ಉರಿಯಲು ಶುರುವಾಗಿದೆ.
ತಕ್ಷಣ ಬೆಂಕಿ ಹಾರಿಸಲು ಪ್ರಯತ್ನಿಸುವ ವೇಳೆ ಸಿದ್ದಯ್ಯನಿಗೂ ಬೆಂಕಿಯ ಜ್ವಾಲೆ ರಾಚಿದೆ. ಪರಿಣಾಮ ಆತನ ಸ್ಥಳದಲ್ಲೇ ಕುಸಿದು ಬಿದ್ದು ಮೈ ಮತ್ತು ಕೈ ಕಾಲುಗಳು ಬೆಂಕಿಗೆ ಸುಟ್ಟುಹೋಗಿ ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಅಕ್ಕಪಕ್ಕದ ತೋಟದವರು ಸಿದ್ದಯ್ಯ ಬೆಂಕಿಯಲ್ಲಿ ಬಿದ್ದಿರುವುದನ್ನು ಕಂಡು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್.ಐ ಸಂಗಮೇಶ್ ಮೇಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ರೈತ ಸಿದ್ದಯ್ಯಗೆ ಮೂವರು ಗಂಡು, ಮೂವರು ಹೆಣ್ಣು ಮಕ್ಕಳು ಇದ್ದಾರೆ.