

ತುಮಕೂರು: ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿಯಿರುವ 2.50ಲಕ್ಷ ಹುದ್ದೆಗಳನ್ನು ಮುಂದಿನ ಐದು ವರ್ಷದಲ್ಲಿ ಭರ್ತಿ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಘೋಷಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಬದ್ಧ ಎಂದರು.
ರಾಜ್ಯದಲ್ಲಿ 5.50 ಲಕ್ಷ ಜನ ಸರ್ಕಾರಿ ನೌಕರರು ಇದ್ದಾರೆ, ಈಗಾಗಲೇ ಮಂಜೂರಾಗಿರುವ 2.50ಲಕ್ಷ ಹುದ್ದೆ ಖಾಲಿ ಉಳಿದಿವೆ, ಈ ಎಲ್ಲಾ ಖಾಲಿ ಹುದ್ದೆಗಳನ್ನು ಮುಂದಿನ ಐದು ವರ್ಷದಲ್ಲಿ ತುಂಬುತ್ತೇವೆ ಎಂದು ಪರಮೇಶ್ವರ ಭರವಸೆ ನೀಡಿದರು.
ಸರ್ಕಾರ ನಡೆಸುವವರು ಸರ್ಕಾರದ ನೌಕರರು, ಪ್ರಾಮಾಣಿಕ, ದಕ್ಷ ನೌಕರರೇ ಸರ್ಕಾರದ ಆಸ್ತಿ ಎನ್ನಿಸಿದ್ದಾರೆ. 102 ವರ್ಷಗಳ ಇತಿಹಾಸ ಹೊಂದಿರುವ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಸಂಕಷ್ಟದ ಕಾಲದಲ್ಲಿ ನೆರವಾಗಿರುವುದನ್ನು ಸದಾ ಸ್ಮರಿಸುತ್ತೇವೆ ಎಂದರು.
ಕರೊನಾ ಸಂದರ್ಭದಲ್ಲಿ ಒಂದು ದಿನದ ವೇತನ ನೀಡಿದ್ದ ರಾಜ್ಯದ ನೌಕರರು ಬರೋಬ್ಬರಿ 200 ಕೋಟಿ ರೂ. ದೇಣಿಗೆ ನೀಡಿದ್ದೀರ, ಸಾಕಷ್ಟು ಕಷ್ಟದ ಸಂದರ್ಭದಲ್ಲಿ ನೆರವು ನೀಡಿದ್ದೀರ, ಅದನ್ನು ನಮ್ಮ ಸರ್ಕಾರ ಸ್ಮರಿಸಿಕೊಳ್ಳಲಿದೆ ಎಂದರು.
ರಾಜ್ಯದ ಜನರ ಸೇವೆ ಮಾಡುವ ನಾವು, ನೀವು ಆಡಳಿತ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದೇವೆ, ಕೆಂಗಲ್ ಹನುಮಂತಯ್ಯ ಅವರಿಂದ ಆರಂಭವಾದ ಆಡಳಿತ ವ್ಯವಸ್ಥೆ ದೇಶಕ್ಕೆ ಮಾದರಿ ಎನ್ನಿಸಿದ್ದರೆ ಅದಕ್ಕೆ ನೌಕರರ ಕೊಡುಗೆಯಿದೆ ಎಂದರು.