ವಿಚ್ಛೇದನ ಬಯಸಿದ್ದ 13 ಜೋಡಿ ಮುನಿಸು ಮರೆತರು

web
Published on

ತುಮಕೂರು: ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 13 ಜೋಡಿ ಮುನಿಸು ಮರೆತು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತ್​ಕುಮಾರ್​ ಸಮ್ಮುಖದಲ್ಲಿ ಮತ್ತೆ ಒಂದಾದರು.

ಶನಿವಾರ ರಾಷ್ಟ್ರೀಯ ಲೋಕ್​ ಅದಾಲತ್​ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ವಾದ-, ವಿವಾದಗಳನ್ನು ಆಲಿಸಿ ಎರಡೂ ಕಡೆಯ ವಕೀಲರನ್ನು ಸಂಪರ್ಕಿಸಿ ಅವರ ಸಮ್ಮುಖದಲ್ಲಿ ಒಂದು ಮಾಡಲಾಯಿತು.

ಗಂಡ ಹೆಂಡತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಚಿಕ್ಕ ವಿಚಾರಗಳಿಗೆ ಮನಸ್ಥಾಪ ಮಾಡಿಕೊಳ್ಳಬಾರದು,ಮಕ್ಕಳ ಹಿತಕ್ಕಾಗಿ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಅವರ ಮನಸ್ಸಿಗೆ ಘಾಸಿ ಮಾಡಬಾರದು ಎಂದು ಬಿ.ಜಯಂತ್​ ಕುಮಾರ್​ ತಿಳಿಹೇಳಿದರು.

ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಲಯದ ನ್ಯಾಯಾಧೀಶ ಮುನಿರಾಜು, ಗಂಡ, ಹೆಂಡತಿ ಎರಡು ಕೈಗಳಿದ್ದಂತೆ ಒಂದು ಕೈ ಏನೂ ಕೆಲಸ ಮಾಡಲಾಗದು ಎರಡೂ ಕೈ ಇದ್ದರೆ ಚಪ್ಪಾಳೆ, ಇಬ್ಬರೂ ಒಬ್ಬರನ್ನೊಬ್ಬರು ನಂಬಬೇಕು,ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯಿಂದ ಜೀವನ ನಡೆಸಿದಾಗ ಸಮಾಜದಲ್ಲಿ ಶಾಂತಿ ಸಾಧ್ಯ ನೀವು ಸಹ ಅಭಿವೃದ್ಧಿ ಹೊಂದುತ್ತೀರಿ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಇದ್ದರು. ಮಧುಗಿರಿ ನ್ಯಾಯಾಲಯದಲ್ಲಿ 2, ಪಾವಗಡದಲ್ಲಿ 1, ತಿಪಟೂರಿನಲ್ಲಿ 1, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ 1, ಕೌಟುಂಬಿಕ ನ್ಯಾಯಾಲಯದಲ್ಲಿ 13 ಜೋಡಿ ಸೇರಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ 18 ಜೋಡಿ ಒಂದಾಗಿ ಮನೆಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net