ಸ್ವಧರ್ಮ ಪ್ರೀತಿಯೊಂದಿಗೆ ಅನ್ಯಧರ್ಮ ಗೌರವಿಸಿ : ವಕೀಲ ಹಮ್ಜತ್ ಹೆಜಮಾಡಿಕೋಡಿ ಸಲಹೆ

New Project (23)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ನಮ್ಮ ಹಿರಿಯರು ಜೀವನಾನುಭವದಲ್ಲಿ ಗಳಿಸಿದ ಸಂಸ್ಕೃತಿ ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುವ ಜವಾಬ್ದಾರಿ ನಮ್ಮದು. ನಮ್ಮ ಧರ್ಮ ಪ್ರೀತಿಸುವ ಜತೆಗೆ ಅನ್ಯ ಧರ್ಮವನ್ನು ಗೌರವಿಸುವ ಮೂಲಕ ಸಾಮರಸ್ಯದ ಜೀವನ ನಡೆಸಬೇಕು ಎಂದು ವಕೀಲ ಹಮ್ಜತ್ ಹೆಜಮಾಡಿಕೋಡಿ ಅಭಿಪ್ರಾಯಪಟ್ಟರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 23ನೇ ವರ್ಷದ ತುಳುವೆರೆ ತುಡಾರ ಪರ್ಬದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿ ಗೌರವ ಸಲಹೆಗಾರ ಡಾ.ಎನ್.ಟಿ ಅಂಚನ್, ಕತ್ತಲನ್ನು ಹೋಗಲಾಡಿಸುವ ದೀಪಾವಳಿ ಪರ್ವ ಕಾಲದಲ್ಲಿ ಯುವಜನತೆ ಸಂಸ್ಕಾರ ಹಾಗೂ ಸಂಸ್ಕೃತಿ ಅಳವಡಿಸಿ ಜೀವನ ಸಾಗಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಗ್ರೆಟ್ಟಾ ಮೊರಾಸ್, ಜಗದೀಶ್ ಉಪಾಧ್ಯಾಯ ಭಾಗವಹಿಸಿದ್ದರು. ಮೂಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷ ವಿನಯ ಕುಮಾರ್ ಮಟ್ಟು ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು, ಯುವವಾಹಿನಿ ಘಟಕದ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಸುವರ್ಣ, ಪ್ರಮುಖರಾದ ಪ್ರೇರಣಾ ಡಿ, ಪೃಥ್ವಿಕ್ ಡಿ., ಶಕೀಲಾ ಹರೀದ್ರ ಸುವರ್ಣ, ಸತೀಶ್ ಸಾಲ್ಯಾನ್ ಉಪಸ್ಥಿತರಿದ್ದರು. ರಾಮಚಂದ್ರ ಕೋಟ್ಯಾನ್ ಪ್ರಸ್ತಾವನೆಗೈದರು. ಕವನ್ ಕುಬೆವೂರು ಸನ್ಮಾನ ಪತ್ರ ವಾಚಿಸಿದರು. ವಿನಯ ಕುಮಾರ್ ಸ್ವಾಗತಿಸಿದರು. ಪ್ರೇರಣಾ ವಂದಿಸಿದರು. ಜಯಕುಮಾರ್ ಕುಬೆವೂರು ನಿರೂಪಿಸಿದರು.

ಸನ್ಮಾನ, ಬಹುಮಾನ ವಿತರಣೆ

ಮೂಲ್ಕಿ ಸೀಮೆಯ ನಾಯ್ಕಪಟ್ಟದ ಗಡಿ ಪ್ರಧಾನ ಮಾಗಂದಡಿ ಗೋಪಾಲ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವೇತನ, ಗೂಡುದೀಪ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net