

ನಾಗಮಂಗಲ: ಜಾನುವಾರುಗಳಿಗೆ ಕಾಲುಬಾಯಿ ರೋಗವನ್ನು ತಡೆಗಟ್ಟಲು ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಲಸಿಕೆಯನ್ನು ಹೈನುಗಾರರು ನಿರ್ಲಕ್ಷ್ಯ ಮಾಡದೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ದೇವಲಾಪುರ ಹೋಬಳಿಯ ಹರದನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಹಾಗೂ ಪಶು ಆಸ್ಪತ್ರೆಯನ್ನು ಉದ್ಘಾಟಿಸುವ ಜತೆಗೆ ಜಾನುವಾರುಗಳಿಗೆ ಕಾಲುಬಾಯಿರೋಗ ಲಸಿಕಾ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಕಾಲುಬಾಯಿ ರೋಗದಿಂದ ಇತ್ತೀಚಿನ ದಿನಗಳಲ್ಲಿ ನೂರಾರು ರಾಸುಗಳು ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಲಸಿಕೆಯನ್ನು ನೀಡಲಾಗುತ್ತಿದೆ. ಕಾಲುಬಾಯಿ ರೋಗ ಸಾಂಕ್ರಾಮಿಕ ರೋಗವಾಗಿದ್ದು, ಒಂದು ಜಾನುವಾರಿಗೆ ಬಂದರೆ ಎಲ್ಲ ಜಾನುವಾರುಗಳಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ. ತಾಲೂಕಿನಲ್ಲಿ ಒಟ್ಟು 72 ಸಾವಿರ ಜಾನುವಾರುಗಳಿದ್ದು, ಅಷ್ಟೂ ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು. ಪಶು ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಹೆಚ್ಚಿದೆ. ಆದರೆ ಯಾವುದೇ ಜಾನುವಾರಿಗೆ ತೊಂದರೆಯಾಗದಂತೆ ಲಭ್ಯವಿರುವ ವೈದ್ಯರಿಗೆ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸುವುದರಿಂದ ಜಾನುವಾರುಗಳ ಸಾವನ್ನು ತಡೆಗಟ್ಟುವ ಮೂಲಕ ರೈತರ ಆರ್ಥಿಕ ನಷ್ಟವನ್ನು ತಪ್ಪಿಸಬಹುದಾಗಿದೆ. ಲಸಿಕಾ ಅಭಿಯಾನ ಕುರಿತಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಹೆಚ್ಚಿನ ಪ್ರಚಾರ ಮಾಡುವ ಮೂಲಕ ರೈತರಿಗೆ ಅರಿವು ಮೂಡಿಸುವಂತೆ ಸೂಚಿಸಿದರು.
ಗೃಹಲಕ್ಷ್ಮಿ ಶೇ.100ರಷ್ಟು ನೊಂದಣಿಯಾಗಲಿ: ತಾಲೂಕಿನ ಪ್ರತಿಯೊಬ್ಬ ಫಲಾನುಭವಿಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದ ಹಣ ಸಿಗುವಂತಾಗಬೇಕು. ತಾಲೂಕಿನಲ್ಲಿ ಯಾವೊಬ್ಬ ಮಹಿಳೆಯು ನೋಂದಣಿಯಿಂದ ಹಾಗೂ ಗೃಹಲಕ್ಷ್ಮಿ ಹಣ ಪಡೆಯುವುದರಿಂದ ವಂಚಿತರಾಗದಂತೆ ಮುಂದಿನ ಒಂದು ವಾರದೊಳಗೆ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕ್ರಮವಹಿಸಬೇಕು. ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾದವರನ್ನು ಗುರುತು ಮಾಡಿ ಫಲಾನುಭವಿಗಿರುವ ಸಮಸ್ಯೆಯನ್ನು ಬಗೆಹರಿಸಿಕೊಡುವ ಮೂಲಕ ಶೇ.100ರಷ್ಟು ಪ್ರಗತಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ತಾ.ಪಂ. ಇಒ ಚಂದ್ರಮೌಳಿ, ಪಶು ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕುಮಾರ್, ಟಿಎಚ್‌ಒ ಡಾ.ಪ್ರಸನ್ನ, ಡಿಸಿಸಿ ಬ್ಯಾಂಕ್ ನಿರ್ದೇಶಕ ನರಸಿಂಹಮೂರ್ತಿ ಯುವ ಮುಖಂಡ ಸುನೀಲ್ ಲಕ್ಷ್ಮೀಕಾಂತ್ ಸೇರಿದಂತೆ ಮತ್ತಿತರಿದ್ದರು.