

ಕಾರಟಗಿ: ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಸರ್ಕಾರದ ಆಂದೋಲನದ ಜತೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ತಾಪಂ ಇಒ ಎನ್.ನರಸಪ್ಪ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಕ್ಷಯ ರೋಗ ಲಕ್ಷಣ ಇರುವವರು ನಿರ್ಲಕ್ಷ್ಯ ತೋರದೆ ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಈ ರೋಗ ಒಬ್ಬರಿಂದೊಬ್ಬರಿಗೆ ಹರಡುತ್ತದೆ. 2025ರೊಳಗೆ ದೇಶವನ್ನು ಕ್ಷಯರೋಗ ಮುಕ್ತ ಮಾಡಲು ಸರ್ಕಾರ ಪಣ ತೊಟ್ಟಿದೆ. ಯುವಕರು, ಮಹಿಳೆಯರು ಕ್ಷಯರೋಗ ಮುಕ್ತವಾಗಿಸಲು ಶ್ರಮಿಸಬೇಕೆಂದು ತಿಳಿಸಿದರು.
ತಾಪಂ ಸಹಾಯಕ ನಿರ್ದೇಶಕಿ ವೈ.ವನಜಾ ಮಾತನಾಡಿ, ಪ್ರತಿ ಗ್ರಾಪಂನಲ್ಲಿ ಕ್ಷಯರೋಗ ಮುಕ್ತ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸಲಾಗುವುದು ಎಂದರು.
ಬೇವಿನಾಳ ಸಮುದಾಯ ಆರೋಗ್ಯ ಅಧಿಕಾರಿ ಹನುಮಂತಪ್ಪ ಗುರಿಕಾರ ಕ್ಷಯರೋಗ ಲಕ್ಷಣದ ಕುರಿತು ಗ್ರಾಪಂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ತಾಪಂ ಸಹಾಯಕ ನಿರ್ದೇಶಕಿ ವೈ.ವನಜಾ, ಆರೋಗ್ಯ ಅಧಿಕಾರಿ ಹನುಮಂತಪ್ಪ ಗುರಿಕಾರ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ನಿರುಪಾದಿ ಅರಳಿಗನೂರು, ಪರಶುರಾಮ, ದೇವರಾಜ ಇತರರಿದ್ದರು.