

ಗಂಗಾವತಿ: ಜನರ ಸಹಕಾರದೊಂದಿಗೆ ಕ್ಷಯಮುಕ್ತ ಜಿಲ್ಲೆಯನ್ನಾಗಿ ಸಂಕಲ್ಪ ಮಾಡಿದ್ದು, ರೋಗಿಗಳ ಪತ್ತೆಗಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ್ ಹೇಳಿದರು.
ನಗರದ ಬಾಲಕರ ಸ.ಪ.ಪೂ.ಕಾಲೇಜಿನ ಪ್ರೌಢಶಾಲೆ ಮೈದಾನದಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಕ್ಷಯ ರೋಗಿಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ಪ್ರತಿ ವಾರ್ಡ್‌ಗಳಲ್ಲಿ ಆರೋಗ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿ ಮನೆಗೆ ಭೇಟಿ ನೀಡಿ ರೋಗಿಗಳನ್ನು ಪತ್ತೆ ಮಾಡಲಾಗುವುದು. ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಆಸ್ಪತ್ರೆ ಗಮನಕ್ಕೆ ತರಬೇಕಿದ್ದು, ಉಚಿತ ಚಿಕಿತ್ಸೆಯೊಂದಿಗೆ ಪ್ರೋತ್ಸಾಹಧನ ಯೋಜನೆಗಳಿವೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಮಾತನಾಡಿ, ವಿಶೇಷ ಅಭಿಯಾನ ಆ.2ರವರಿಗೂ ಮುಂದುವರಿಯಲಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗುತ್ತಿದೆ ಎಂದರು. ಕ್ಷಯರೋಗ ನಿರ್ಮೂಲನಾ ವಿಭಾಗದ ಮೇಲ್ವಿಚಾರಕ ಎಚ್. ಮಲ್ಲಿಕಾರ್ಜುನ, ಕುಷ್ಠರೋಗ ವಿಭಾಗದ ಮೇಲ್ವಿಚಾರಕ ಸುರೇಶ, ಮಲೇರಿಯಾ ಲಿಂಕ್ ವರ್ಕರಗಳಾದ ಎಚ್. ಸುರೇಶ, ರಮೇಶ, ಮುಖ್ಯಶಿಕ್ಷಕ ಗಡ್ಡೆಪ್ಪ ಹಾಗೂ ಶಿಕ್ಷಕರಿದ್ದರು.