ಕ್ಷಯ ರೋಗ ನಿಯಂತ್ರಣಕ್ಕೆ ಸಹಕರಿಸಿ: ಕೇಂದ್ರ ಕ್ಷಯ ರೋಗ ನಿಯಂತ್ರಣ ಜಂಟಿ ಬೆಂಬಲ ಮೇಲ್ವಿಚಾರಣೆ ತಂಡ ಸದಸ್ಯ ಡಾ.ರಾಜೇಂದ್ರ ಪಿ.ಜೋಶಿ ಹೇಳಿಕೆ

21CBP2
Published on

ಚಿಕ್ಕಬಳ್ಳಾಪುರ: ಮಾರಕ ಕಾಯಿಲೆಗಳ ನಿಯಂತ್ರಣ ಚಟುವಟಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಕ್ಷಯ ರೋಗ ನಿಯಂತ್ರಣ ಜಂಟಿ ಬೆಂಬಲ ಮೇಲ್ವಿಚಾರಣೆ ತಂಡದ ಸದಸ್ಯ ಡಾ.ರಾಜೇಂದ್ರ ಪಿ.ಜೋಶಿ ಹೇಳಿದರು.
ಜಿಲ್ಲಾಡಳಿತ ಭವನದ ಮಿನಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಅಡಿ ಗುರುವಾರ ಆಯೋಜಿಸಿದ್ದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, 2025ರ ವೇಳೆಗೆ ಭಾರತವನ್ನು ಕ್ಷಯ ರೋಗ ಮುಕ್ತ ದೇಶವನ್ನಾಗಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಈಗಾಗಲೇ ತ್ವರಿತ ರೋಗ ಪತ್ತೆ, ಗುಣಮಟ್ಟದ ಚಿಕಿತ್ಸೆ, ಸಮರ್ಪಕ ನಿಗಾ ಮತ್ತು ರೋಗಿಗಳ ಆರೈಕೆಗೆ ವಿಶೇಷ ಸೌಲಭ್ಯ ಸೇರಿ ಪರಿಹಾರಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಕ್ಷಯ ರೋಗ ನಿಯಂತ್ರಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಸ್ವಯಂ ಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಗಂಭೀರ ಸ್ವರೂಪ ಪಡೆದ ಬಳಿಕ ಎಚ್ಚೆತ್ತುಕೊಳ್ಳುವುದರಿಂದ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.
ಕ್ಷಯ ರೋಗ ನಿರ್ಮೂಲನಾಧಿಕಾರಿಗಳಾದ ಯಲ್ಲಾ ರಮೇಶ್ ಬಾಬು, ಅನಿಲ್ ಮತ್ತಿತರರು ಇದ್ದರು.

ಆಂದೋಲನಕ್ಕೆ ಚಾಲನೆ: ಮನೆ ಮನೆ ಬಾಗಿಲಿಗೆ ತೆರಳಿ ಕ್ಷಯರೋಗ ಪತ್ತೆ ಹಚ್ಚುವ ಜತೆಗೆ ರೋಗಿಗಳಿಗೆ ಚಿಕಿತ್ಸೆ ಮತ್ತು ಆರೈಕೆಯ ಉದ್ದೇಶದಿಂದ ರಾಜ್ಯ ಸರ್ಕಾರವು ಜು.18 ರಿಂದ ಆ.15 ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ 11 ಮಂದಿಯ ತಂಡವು ಜಿಲ್ಲೆಗೆ ಭೇಟಿ ನೀಡಿ, ಕ್ಷಯ ರೋಗದ ನಿಯಂತ್ರಣದಲ್ಲಿ ನಿರ್ವಹಣೆ ಮತ್ತು ಸಾಧನೆಯ ಮಾಹಿತಿ ಸಂಗ್ರಹಿಸಿದೆ. ಜಾಗೃತಿಯ ಕರ ಪತ್ರ ಮತ್ತು ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸುವ ಮೂಲಕ ವಿಶೇಷ ಆಂದೋಲನಕ್ಕೆ ಚಾಲನೆ ನೀಡಲಾಯಿತು.

ಸಹಾಯವಾಣಿಯ ನೆರವು: ಎಲ್ಲರೂ ಒಗ್ಗೂಡಿ ಕ್ಷಯ ರೋಗದ ವಿರುದ್ಧ ಹೋರಾಟ ನಡೆಸಿ, ಕರ್ನಾಟಕವನ್ನು ಕ್ಷಯಮುಕ್ತ ರಾಜ್ಯವನ್ನಾಗಿಸಬೇಕಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮತ್ತಷ್ಟು ಅರಿವು ಮೂಡಿಸುವ ಚಟುವಟಿಕೆ ಕೈಗೊಳ್ಳುತ್ತಿದೆ. ಕ್ಷಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಿ ಕಫ ಪರೀಕ್ಷೆ ಮಾಡಿಸಿಕೊಳ್ಳಬಹುದು. ರೋಗ ದೃಢಪಟ್ಟಲ್ಲಿ ಉಚಿತ ಚಿಕಿತ್ಸೆ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104 ಅಥವಾ ಕ್ಷ ಸಹಾಯವಾಣಿ ಸಂಖ್ಯೆ 1800116666 ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್.ಮಹೇಶ್ ಕುಮಾರ್ ತಿಳಿಸಿದ್ದಾರೆ.

ತಂಡದಲ್ಲಿದ್ದ ಅಧಿಕಾರಿಗಳು: ಕೇಂದ್ರ ಸರ್ಕಾರದ ಜಂಟಿ ಬೆಂಬಲ ಮೇಲ್ವಿಚಾರಣೆಯ ತಂಡದಲ್ಲಿ ಸದಸ್ಯರಾದ ರಂಜನಿ ರಾಮಚಂದ್ರನ್, ರಾಜೇಶ್ ಎಲ್.ಕಡೆಮಣಿ, ಜಾರ್ಜ್ ಬೆಲಾ ಫ್ರಿಸ್ಟೇಕ್, ಎಸ್.ಆನಂದ, ಶೀಬು ಬಾಲಕೃಷ್ಣ, ಶಿವವಲ್ಲಿನಾಥನ್ ಅರುಣಾಚಲಂ, ವಿಘ್ನೇಶ್ವರನ್ ಸೋಮಸುಂದರನ್, ಹರ್ಷಿದ್ ಲಾಂಡೆ, ಸಮಂತಾ ಗ್ರೇಸ್, ಕೊಪ್ಪಳ್ ಶ್ರೀವತ್ಸವಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net