

ಶಿರಸಿ: ಸಹಕಾರಿ ಸಂಘ ಟಿಎಸ್‌ಎಸ್ ಮೇಲೆ ಆಡಳಿತಾಧಿಕಾರಿ ನೇಮಕ ಮಾಡಿರುವ ಪ್ರಕ್ರಿಯೆಗೆ ರೈತ ವಲಯದ ಅಸಮಾಧಾನ ಮುಗಿಲು ಮುಟ್ಟಿದೆ. ಟಿಎಸ್ ಎಸ್ ಸಂಸ್ಥೆಯ ಎದುರು ಮಂಗಳವಾರ ಸಾವಿರಾರು ರೈತರು ಆಗಮಿಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಆಡಳಿತ ಮಂಡಳಿ ವಜಾ ಮಾಡಿರುವ ಆದೇಶಕ್ಕೆ ಬೆಳಗಾವಿ ಸಹಕಾರಿ ಸಂಘಗಳ ಜಂಟಿ ರಜಿಸ್ಟ್ರಾರ್ ತಡೆಯಾಜ್ಞೆ ನೀಡಿದ್ದು, ಗೊಂದಲಗಳಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.
ಟಿಎಸ್‌ಎಸ್ ಗೆ ಚುನಾವಣೆ ಮೂಲಕ ಆಯ್ಕೆಯಾದ ನಿರ್ದೇಶಕ ಮಂಡಳಿ ಮತ್ತು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರು ಇತ್ತೀಚೆಗೆ ರದ್ದುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿದ್ದರು. ಈ ಪ್ರಕ್ರಿಯೆಯನ್ನು ವಿರೋಧಿಸಿ ವಜಾಗೊಳಿಸಲಾದ ಆಡಳಿತ ಮಂಡಳಿ ಮಂಗಳವಾರ ಪ್ರತಿಭಟನೆ ಮತ್ತು ಕರಾಳ ದಿನ ಆಚರಣೆಗೆ ಕರೆಕೊಟ್ಟಿತ್ತು. ಈ ಕರೆಗೆ ಉತ್ತಮ ಸ್ಪಂದನೆ ವ್ಯಕ್ತಗೊಂಡು ಜಿಲ್ಲೆಯ ಮೂಲೆ ಮೂಲೆಯಿಂದಲೂ ರೈತರು ಆಗಮಿಸಿದ್ದರಲ್ಲದೇ ಇತರ ಸಹಕಾರಿ ಸಂಘಗಳ ಆಡಳಿತ ಮಂಡಳಿ, ಸದಸ್ಯರೂ ಆಗಮಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಟಿಎಸ್ ಎಸ್ ಸಂಸ್ಥೆಯ ಆವರಣದಲ್ಲಿ ನೆರೆದ ರೈತರನ್ನು ಉದ್ದೇಶಿಸಿ ಮಾತನಾಡಿದ ಗೋಪಾಲಕೃಷ್ಣ ವೈದ್ಯ," ಸಂಘದ ಅಭಿಮಾನದಿಂದ ಮತ್ತು ಸಂಘವನ್ನು ಉಳಿಸಿಕೊಳ್ಳುವ ಸಲುವಾಗಿ ನಾವೆಲ್ಲ ಇಲ್ಲಿ ಸೇರಿದ್ದೇವೆ. ಚುನಾವಣೆ ಮೂಲಕ ಆಯ್ಕೆಯಾದ ನಾವು ನಮ್ಮ ಚೌಕಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದು ನಿರ್ಧರಿಸಿದ್ದೆವು. ಆ ಬಳಿಕ ಹಿಂದಿನ ಆಡಳಿತ ಮಂಡಳಿ ಕೋಟಿ ಕೂಟಿ ರೂ. ಲೂಟಿ ಮಾಡಿದ್ದಾರೆ ಎಂಬುದು ನಮಗೆ ತಿಳಿಯಿತು. ಹಣ ದೋಚಿದವರ ಮೇಲೆ ಕಾನೂನು ಕ್ರಮಕ್ಕೆ ನಾವು ಮುಂದಾಗಿದ್ದೇವೆ. ನಮಗೆ ಯಾರ ಮೇಲೂ ವಯಕ್ತಿಕ ದ್ವೇಷವಿಲ್ಲ. ಹಿಂದಿನ ಅವಧಿಯಲ್ಲಾದ ಒಂದೋAದೇ ಪ್ರಕರಣಗಳು ನಮಗೆ ಗೊತ್ತಾಗತೊಡಗಿತು. ಹಿಂದಿನ ವ್ಯವಸ್ಥಾಪಕ ರವೀಶ ಹೆಗಡೆ, 1.83 ಕೋಟಿ ರೂ. ಹಣವನ್ನು ವೇತನವಾಗಿ ಮುಂಚಿತವಾಗಿ ಪಡೆದಿದ್ದಾರೆ. ರವೀಶ ಹೆಗಡೆ 40 ಲಕ್ಷ ಕಾರನ್ನು ಸಂಘಕ್ಕೆ ಖರ್ಚುಹಾಕಿ ಖರೀದಿಸಿದ್ದಾರೆ. ಸಂಸ್ಥೆಯ ಉದ್ಯೋಗಿ ಅನಿಲ ಮುಷ್ಟಗಿ ಸೇರಿದಂತೆ ಪ್ರಮುಖರು ಎಪಿ ಎಂಸಿ ರಿಂಗ್ ರೋಡ್‌ನಲ್ಲಿದ್ದ ಜಾಗ ವನ್ನು ದರ ಗೋಲ್ ಮಾಲ್ ಮಾಡಿ 12 ಕೋಟಿ ರೂ. ನೀಡಿ ಸಂಸ್ಥೆಗೆ ಖರೀದಿ ಮಾಡಿದ್ದಾರೆ. ಸಂಸ್ಥೆಯ ಸಿಬ್ಬಂದಿಗಳ ಓಡಾಟಕ್ಕಾಗಿ ಅನಿಲ ಮುಷ್ಟಗಿ ಅವರು ಟೆಂಪೋ ಖರೀದಿಸಿ, ಬಾಡಿಗೆ ಪಡೆಯುವಲ್ಲಿ ಸಹ ಸಂಸ್ಥೆಗೆ ಮೋಸ ಮಾಡಿದ್ದಾರೆ. ಈಗಾಗಲೇ ಈ ಎಲ್ಲ ಪ್ರಕರಣಗಳಿಗೆ ಸಂಬAಧಿಸಿ ಪೊಲೀಸ್ ದೂರು ನೀಡಿದ್ದೇವೆ. 100 ಕೋಟಿ ರೂ. ಸಾಲವನ್ನು ಸಂಸ್ಥೆಯಿAದ ಅಕ್ರಮವಾಗಿ ನೀಡಿದ ಘಟನೆ ಸಹ ಬೆಳಕಿಗೆ ಬಂದಿದ್ದು, ಈ ಬಗ್ಗೆಯೂ ಪೊಲೀಸ್ ದೂರು ನೀಡಲು ಸಿದ್ಧತೆ ನಡೆಸಿದ್ದೆವು. ಇದೆಲ್ಲ ಕಾರಣಕ್ಕೆ ಸಂಸ್ಥೆಯ ಆಡಳಿತ ಮಂಡಳಿಯನ್ನೇ ರದ್ದು ಮಾಡಿದ್ದು, ಕಾಣದ ಕೈಗಳು ಇಲ್ಲಿ ಕೆಲಸ ಮಾಡಿವೆ. ಸಹಕಾರಿ ಸಂಘಗಳ ಜಿಲ್ಲಾ ನಿಬಂಧಕರು ಶಿರಸಿಯಲ್ಲಿ ಪ್ರಭಾವಿ ವ್ಯಕ್ತಿಯ ಮನೆಯಲ್ಲಿ ಕುಳಿತು ಜಡ್ಜೆಂಟ್ ಬರೆದಂತಿದೆ ಎಂದು ಆರೋಪಿಸಿದರು.
ಟಿಎಸ್ ಎಸ್ ಉಪಾಧ್ಯಕ್ಷ ಎಂ. ಎನ್. ಹೆಗಡೆ, ನಿರ್ದೇಶಕರಾದ ನಿರ್ಮಲಾ ಹೆಗಡೆ, ರವಿ ಹೆಗಡೆ, ವಸಂತ ಹೆಗಡೆ ಇತರರಿದ್ದರು.
ಬೆಳಗಾವಿಯ ಸಹಕಾರಿ ಸಂಘಗಳ ಜಂಟಿ ನಿಬಂಧಕರು ನೀಡಿದ ತಡೆಯಾಜ್ಞೆ ಪ್ರತಿಯನ್ನು ಕೈಲಿ ಹಿಡಿದುಕೊಂಡು ಬಂದ ಆಡಳಿತ ಮಂಡಳಿ ಸದಸ್ಯರು ಕಚೇರಿಯ ತಮ್ಮ ಸ್ಥಾನಗಳಲ್ಲಿ ಕುಳಿತುಕೊಂಡರು. ಇದರಿಂದಾಗಿ ವಿಚಲಿತರಾದ ಆಡಳಿತಾಧಿಕಾರಿ ಎಂ. ಎಚ್. ನಾಯ್ಕ ವಿಷಯ ತಿಳಿದು ದಾಖಲೆಪತ್ರಗಳನ್ನು, ಕಪಾಟುಗಳ ಚಾವಿಯನ್ನು ಗೋಪಾಲಕೃಷ್ಣ ವೈದ್ಯ ಅವರಿಗೆ ಹಸ್ತಾಂತರಿಸಿದರು. ಆದರೆ, ಹಸ್ತಾಂತರಿಸುವ ವೇಳೆ ಎಂ. ಎಚ್. ನಾಯ್ಕ ಕೆಲ ಕಾಗದಪತ್ರಗಳನ್ನು ತೆಗೆದಿಟ್ಟುಕೊಳ್ಳಲು ಯತ್ನಿಸಿದರಲ್ಲದೇ, ಇನ್ನು ಕೆಲವನ್ನು ಕಾಗದಪತ್ರಗಳನ್ನು ಕಿಸೆಯಲ್ಲಿ ಹಾಕಿಕೊಂಡರು. ಇದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆಯಿತಲ್ಲದೇ ಪೊಲೀಸರು ಇಬ್ಬರನ್ನೂ ಸಮಾಧಾನಪಡಿಲು ಯತ್ನಿಸಿದ ಘಟನೆ ನಡೆಯಿತು. ಅಂತಿಮವಾಗಿ ಎಂ. ಎಚ್. ನಾಯ್ಕ ಎಲ್ಲ ಕಾಗಪತ್ರಗಳನ್ನು ಹಸ್ತಾಂತರಿಸಿ ವಾಪಸಾದರು.
ಟಿಎಸ್‌ಎಸ್ ಸಂಸ್ಥೆಯಿಂದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ರೈತರು ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಮನವಿಯಲ್ಲಿ ಸಹಕಾರಿ ಸಂಘದ ಮೇಲೆ ಗದಾ ಪ್ರಹಾರ ನಡೆಸಲಾಗುತ್ತಿದೆ. ಚುನಾಯಿತ ನಿರ್ದೇಶಕರನ್ನು ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವ ಪ್ರಕ್ರಿಯೆ ಖಂಡನಾರ್ಹ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಟಿಎಸ್‌ಎಸ್ ಆಡಳಿತ ಮಂಡಳಿ ವಜಾ ಮೂಲಕ ಸರ್ಕಾರದ ಹೆಸರಿಗೆ ಮಸಿ ಬಳಿಯುವ ಕೆಲಸ ತಳಮಟ್ಟದ ಅಧಿಕಾರಿಗಳಿಂದ ಆಗಿದೆ. ಈ ಘಟನೆಯಿಂದ ಎಲ್ಲ ಸಹಕಾರಿ ಸಂಘಗಳು ಎಚ್ಚರಗೊಳ್ಳಬೇಕು. ಈಗ ತಡೆಯಾಜ್ಞೆ ಬಂದಿದೆ ಅಷ್ಟೆ. ಆದರೆ, ಪ್ರಕರಣ ಖುಲಾಸೆ ಆಗಿಲ್ಲ. ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷರು, ಟಿಎಸ್‌ಎಸ್ ಶಿರಸಿ