ಭೂಮಿ, ಬದುಕು ಉಳಿಸಿಕೊಳ್ಳುವ ಯತ್ನ

25.07.2024 SDLP 02
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಶಿಡ್ಲಘಟ್ಟದಿಂದ ರೈತ ಸಂಘದ ಸದಸ್ಯರು, ತಾಲೂಕಿನ ರೈತರೊಂದಿಗೆ ತೆರಳಿದರು. ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತಿತರರು ಹಾಜರಿದ್ದರು.
Published on
  • ರೈತ ಸಂಘ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಹೇಳಿಕೆ- ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಖಂಡಿಸಿ ರೈತರ ಬೆಂಗಳೂರು ಚಲೋ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ತಾಲೂಕಿನ ಜಂಗಮಕೋಟೆ ಹೋಬಳಿಯ ಕೆಲವು ಹಳ್ಳಿಗಳ ಭೂಮಿಯನ್ನು ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಗುರುತಿಸಿರುವ ಸರ್ಕಾರದ ನಿಲುವನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತಾಲೂಕಿನ ರೈತ ಸಂಘದ ಸದಸ್ಯರು ಗುರುವಾರ ಬೆಂಗಳೂರಿಗೆ ತೆರಳಿದರು.

ರೈತ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಂಗಮಕೋಟೆ ಹೋಬಳಿ ಕೇಂದ್ರದ ಸುತ್ತಲಿನ 13 ಗ್ರಾಮಗಳ ವ್ಯಾಪ್ತಿಗೆ ಬರುವ ಸರ್ಕಾರಿ ಗೋಮಾಳ, ಕೃಷಿ ಭೂಮಿ ಸೇರಿ ಒಟ್ಟು 1823 ಎಕರೆಯಷ್ಟು ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿದೆ. ಗುರುತಿಸಿರುವ ಬಹುಪಾಲು ಜಾಗ ಲವತ್ತಾದ ಕೃಷಿ ಭೂಮಿಯಾಗಿದೆ. ಇಲ್ಲಿ ವಾಣಿಜ್ಯ ಬೆಳೆಗಳಾದ ರೇಷ್ಮೆ, ದ್ರಾಕ್ಷಿ ಮಾವು ಸೇರಿ ತೋಟಗಾರಿಕಾ ಬೆಳೆಗಳು, ರಾಗಿ, ಅವರೆ, ಅಲಸಂದೆ, ತೊಗರಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು ಈ ಭಾಗದ ರೈತರ ಜೀವನಾಧಾರವಾಗಿದೆ.

ಹಳ್ಳಿಗಳು ಬೆಳೆದಂತೆ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಜಾಗವಿಲ್ಲದೆ, ಊರುಗಳ ಹತ್ತಿರದಲ್ಲೇ ಇರುವ ಕೃಷಿಭೂಮಿಯಲ್ಲಿ ಕಟ್ಟಿಕೊಂಡಿರುವ ವಾಸದ ಮನೆಗಳು, ಕೃಷಿ ಪೂರಕ ಆದಾಯದ ಮೂಲಕ್ಕಾಗಿ ಕಟ್ಟಿಕೊಂಡ, ರೇಷ್ಮೆ ಹುಳು ಸಾಕಣೆ ಮನೆಗಳು, ಕೋಳಿಫಾರಂ ಮತ್ತಿತರ ಕಟ್ಟಡಗಳಿವೆ. ಜತೆಗೆ ಹಸುಗಳು, ಎಮ್ಮೆ ಮತ್ತು ಕುರಿ ಮೇಕೆ ಮುಂತಾದವುಗಳನ್ನು ಒಳಗೊಂಡ ಪಶುಪಾಲನೆ ಕೂಡ ಇಲ್ಲಿನ ಅದಾಯದ ಮೂಲವಾಗಿದೆ. ಜಾನುವಾರುಗಳ ಮೇವಿನ ಮೂಲವೂ ಇದೇ ಕೃಷಿ ಭೂಮಿಯಾಗಿದೆ. ಇವುಗಳನ್ನು ಒಳಗೊಂಡ 13 ಗ್ರಾಮಗಳ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಿ ಸೇರಿದೆ. ಈ ಭೂಮಿಯನ್ನು ನಂಬಿ 13 ಹಳ್ಳಿಗಳ ಸುಮಾರು 1300 ಕುಟುಂಬಗಳು ಬದುಕುತ್ತಿವೆ. 5000ಕ್ಕೂ ಹೆಚ್ಚು ಜನರ ಮೂಲ ಕಸುಬು ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಾಗಿವೆ. ಭೂ ಸ್ವಾಧೀನದಿಂದ ಕೃಷಿ ಮಾತ್ರ ಗೊತ್ತಿರುವ ನೂರಾರು ರೈತ ಕುಟುಂಬಗಳು ಪೂರ್ತಿ ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತವೆ. ಇದೇ ಊರುಗಳ ಕೂಲಿ ಕಾರ್ಮಿಕರು, ಪಶುಪಾಲನೆ ನಂಬಿ ಬದುಕುತ್ತಿರುವರು, ಹಳ್ಳಿಗಳಲ್ಲಿ ಕೃಷಿ ಪೂರಕ ಇತರ ಕೆಲಸ ಮಾಡುತ್ತಿರುವವರ ಮೇಲೂ ಇದರಿಂದ ನೇರ ಪರಿಣಾಮ ಬೀರುತ್ತದೆ. ಈ ಎಲ್ಲ ಕಾರಣಗಳಿಂದ, ರೈತರ ಉಳಿವಿಗಾಗಿ ಹೋರಾಟ ಮಾಡಿಯಾದರೂ ಇರುವ ಭೂಮಿ ಮತ್ತು ಬದುಕುವ ಅವಕಾಶವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದು ಸ್ಥಳೀಯರಿಗೆ ಅನಿವಾರ್ಯವಾಗಿದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಪದಾಧಿಕಾರಿಗಳಾದ ಗುಡಿಹಳ್ಳಿ ಕೆಂಪಣ್ಣ, ನಾರಾಯಣದಾಸರಹಳ್ಳಿ ಕೃಷ್ಣಪ್ಪ, ಮಳಮಾಚನಹಳ್ಳಿ ರಮೇಶ್, ಸುಂಡ್ರಹಳ್ಳಿ ಬೀರಪ್ಪ, ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಪಿ.ವಿ.ದೇವರಾಜ್, ಎ.ಜಿ.ನಾರಾಯಣಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net