

ಆನೇಕಲ್: ಚಾಲಕನ ನಿಯಂತ್ರಣ ತಪ್ಪಿ ಹಾಲೋ ಬ್ಲಾಕ್ ತುಂಬಿದ್ದ ಕ್ಯಾಂಟರ್ ಒಂದು ಮುಗುಚಿದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪಸಿದ್ದನ ದೊಡ್ಡಿ ಬಳಿ ನಡೆದಿದೆ.
ಮೃತರನ್ನು ಬಿಹಾರ ಮೂಲದ ಅಖಿಲೇಶ್(28) ಮಿಥಿಲೇಶ್(30) ಎಂದು ಗುರುತಿಸಲಾಗಿದ್ದು, ರತ್ನಂ ಪ್ಲೋರಿಂಗ್ ಕಂಪನಿಗೆ ಸೇರಿದ್ದ ಕ್ಯಾಂಟರ್ ಪಲ್ಟಿಯಾಗಿ ಅವಘಡ ಸಂಭವಿಸಿದೆ.
ರತ್ನಂ ಪ್ಲೋರಿಂಗ್ಗೆ ಸೇರಿದ್ದ ಲಾರಿಯು ಹಾಲೋಬ್ಲಾಕ್ಗಳನ್ನು ತುಂಬಿಕೊಂಡು ಸಾಗುವ ವೇಳೆ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪಸಿದ್ದನ ದೊಡ್ಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮುಗುಚಿದೆ.
ಲಾರಿ ಮುಗುಚಿದ ಪರಿಣಾಮ ಅದರಲ್ಲಿದ್ದ ಹಾಲೋ ಬ್ಲಾಕ್ಗಳು ಏಕಾಏಕಿ ಬಿದ್ದ ಪರಿಣಾಮ ಓರ್ವ ಕಾರ್ಮಿಕ ಸ್ಥಳದಲ್ಲೇ ಅಸುನೀಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಕಾರ್ಮಿಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಜಿಗಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.