

ಕೈಲಾಂಚ : ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಕೆ.ಪಿ.ದೊಡ್ಡಿ ಗ್ರಾಮದ ಬಳಿ ರಸ್ತೆಯಲ್ಲಿ ಶನಿವಾರ ಒಕ್ಕಣೆ ಮಾಡಿದ್ದ ಹುರಳಿಕಾಯಿ ಮೇಲೆ ಹರಿದ ಕಾರು ಸುಟ್ಟು ಭಸ್ಮವಾಗಿದೆ.
ಬೆಂಗಳೂರಿನ ಬಾಬು ಅವರು ಅಂಕನಹಳ್ಳಿಯಲ್ಲಿ ಸಂಬಂಧಿಕರ ಗೃಹಪ್ರವೇಶ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದರು. ಕೆ.ಪಿ. ದೊಡ್ಡಿ ಬಳಿ ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಹುರುಳಿ ಬೆಳೆ ಕಾರಿನ ಚಕ್ರ ಹಾಗೂ ಇಂಜಿನ್‌ಗೆ ಸಿಲುಕಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದವರು ಇಳಿದು ಬೆಂಕಿಯಿಂದ ಪಾರಾಗಿದ್ದಾರೆ.
ಬೆಂಕಿ ಕಾಣುತ್ತಲೇ ಗ್ರಾಮಸ್ಥರು ನೀರು ಹಾಕಿ ನಂದಿಸಲು ಪ್ರಯತ್ನಪಟ್ಟರಾದರೂ ಪ್ರಯೋಜನ ಆಗಲಿಲ್ಲ. ಬೆಂಕಿ ಹೆಚ್ಚಾಗಿ ಕಾರಿನ ಸುತ್ತ ಯಾರೂ ಹೋಗದಂತಾಯಿತು. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡು ಕಾರು ಸುಟ್ಟು ಕರಕಲಾಯಿತು. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.