ಆಸ್ಪತ್ರೆ ಅಧಿಕಾರಿಗಳಿಗೆ ತರಾಟೆ

ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಸಂತೋಷ್ ಅವರಿಂದ ಹಾಜರಾತಿ ಪುಸ್ತಕವನ್ನು ಉಪ ಲೋಕಾಯುಕ್ತ ಬಿ. ವೀರಪ್ಪ ಪರಿಶೀಲಿಸಿದರು.
1
ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಸಂತೋಷ್ ಅವರಿಂದ ಹಾಜರಾತಿ ಪುಸ್ತಕವನ್ನು ಉಪ ಲೋಕಾಯುಕ್ತ ಬಿ. ವೀರಪ್ಪ ಪರಿಶೀಲಿಸಿದರು.
Published on

ಉಪಲೋಕಾಯುಕ್ತ ದಿಢೀರ್ ಭೇಟಿ ಶೌಚಗೃಹಗಳ ಅವ್ಯವಸ್ಥೆ ಕಂಡು ಆಕ್ರೋಶ



ಚಿಂತಾಮಣಿ : ನಗರದ ಸಾರ್ವಜನಿಕ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಗೈರು ಹಾಜರಿ, ಲಂಚಕ್ಕೆ ಬೇಡಿಕೆ ಇಡುವ ವೈದ್ಯರ ಬಗ್ಗೆ, ಖಾಸಗಿ ಮೆಡಿಕಲ್ ಮಳಿಗೆಗಳಲ್ಲಿ ಔಷಧ ಖರೀದಿಸುವಂತೆ ಚೀಟಿ ಬರೆದುಕೊಡುವ ವೈದ್ಯರ ಬಗ್ಗೆ, ಆಸ್ಪತ್ರೆ ಶೌಚಗೃಹದ ಅವ್ಯವಸ್ಥೆ ಸೇರಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಉಪಲೋಕಾಯುಕ್ತ ಬಿ.ವೀರಪ್ಪ ಅವರು ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್ ಅವರನ್ನು ತರಾಟೆಗೆ ತೆಗೆದು ಕೊಂಡ ಪ್ರಸಂಗ ನಡೆಯಿತು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆಯಲ್ಲಿದ್ದ ಬಿ.ವೀರಪ್ಪ ಅವರು 2022 ಮೇ 16ರಂದು ಇದೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಅವ್ಯವಸ್ಥೆಗಳ ಬಗ್ಗೆ ಅಂದಿನ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ಸಂತೋಷ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಅವರು ಉಪಲೋಕಾಯುಕ್ತರಾಗಿ ಎರಡನೇ ಬಾರಿಗೆ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರಿಂದ ಬಂದ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಅವರು ಶನಿವಾರ ಸಂಜೆ ಅನಿರೀಕ್ಷಿತವಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಅವಾಕ್ಕಾದರು.
ಉಪಲೋಕಾಯಕ್ತರು ಸರ್ಕಾರಿ ಆಸ್ಪತ್ರೆಯ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಹಾಗೂ ವಿವರಗಳನ್ನು ಕೇಳಿ ಪಡೆದುಕೊಂಡರು. ರೋಗಿಗಳನ್ನು ಮಾತನಾಡಿಸಿ ನೀಡುತ್ತಿರುವ ಔಷಧ, ಚಿಕಿತ್ಸೆಯ ಕುರಿತು ವಿಚಾರಿಸಿದರು. ಹಾಸಿಗೆಯ ಮೇಲೆ ಕುಳಿತಿದ್ದ ರೋಗಿಗಳನ್ನು ವಿಚಾರಿಸಿದ ಉಪಲೋಕಾಯುಕ್ತರು ಆಸ್ಪತ್ರೆಯಲ್ಲಿ ಅವಧಿ ಮೀರಿರುವ ಔಷಧಗಳು ಮಾತ್ರೆಗಳನ್ನು ಕಂಡು ವೈದ್ಯರನ್ನು ತೀವ್ರ ತರಾಟೆ ತೆಗೆದುಕೊಂಡರು.
ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರ ಕುಮಾರ್, ಸಿಬ್ಬಂದಿಗಳಾದ ಗುರು, ಸಂತೋಷ್, ಚೌಡರೆಡ್ಡಿ, ಸತೀಶ್, ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಸೇರಿದಂತೆ ಮತ್ತಿತರರು
ಉಪಸ್ಥಿತರಿದ್ದರು.

ವೈದ್ಯರ ಮನೆ ತಪಾಸಣೆ ಶೀಘ್ರ
ಒಳರೋಗಿಗಳ ವಾರ್ಡ್ ಮತ್ತು ಶೌಚಗೃಹಗಳಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಸಿಬ್ಬಂದಿ ಮತ್ತು ಆಡಳಿತ ವೈದ್ಯಾಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಹಾಜರಾತಿ ಪುಸ್ತಕ ತರಿಸಿ, ಸಹಿ ಮಾಡದಿರುವುದನ್ನು ಗಮನಿಸಿದರು. ಆಸ್ಪತ್ರೆ ಅವ್ಯವಸ್ಥೆಗಳನ್ನು ಕಂಡು ಆಶ್ಚರ್ಯ ವ್ಯಕ್ತ ಪಡಿಸಿದರು. ತಾಲೂಕು ಕೇಂದ್ರವಾದ ಸರ್ಕಾರಿ ಆಸ್ಪತ್ರೆಯಲ್ಲಿ ಹಲವಾರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲವೇ ವೈದ್ಯರು ಕೆಲಸ ನಿರ್ವಹಿಸುತ್ತಿದ್ದುದನ್ನು ಕಂಡ ನ್ಯಾಯಾಧೀಶರು ಅಕ್ರೋಶ ವ್ಯಕ್ತಪಡಿಸಿರಲ್ಲದೆ, ಸ್ತ್ರೀರೋಗ ತಜ್ಞರಿಬ್ಬರು 10 ಸಾವಿರ ರೂ.ಗಳನ್ನು ಬಲವಂತವಾಗಿ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಅವರ ಹೆಸರುಗಳು ಗೊತ್ತು ಅವರ ಮನೆಗಳನ್ನು ಶೀಘ್ರದಲ್ಲಿಯೇ ತಪಾಸಣೆ ಮಾಡುವುದಾಗಿ ಬಿ.ವೀರಪ್ಪ ಹೇಳಿದರು. ಜನರ ಸೇವೆಗಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಡವನ್ನು ಕಟ್ಟಿಸಿದೆ. ವೈದ್ಯರು ಮತ್ತು ಸಿಬ್ಬಂದಿ ವೇತನಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಜನರಿಗೆ ಫಲಾಫಲ ದೊರೆಯುತ್ತಿಲ್ಲ. ಶೌಚಗೃಹಗಳಲ್ಲಿ ಸ್ವಚ್ಛತೆಯೇ ಕಾಣದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net