

ಮದ್ದೂರು: ಸಮಾಜದಲ್ಲಿ ನೊಂದವರ ಬಾಳಿಗೆ ಸಹಾಯ ಹಸ್ತಚಾಚುವ ಉದ್ದೇಶದಿಂದ ತ್ರಿಶೂಲಂ ಧಾರ್ಮಿಕ ಸಾಮಾಜಿಕ ಸೇವಾ ಸಂಸ್ಥೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ.ರಾಘವೇಂದ್ರ ರಾವ್ ಪುರೋಹಿತರು ತಿಳಿಸಿದರು.
ತಾಲೂಕಿನ ಮಾಲಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಶನಿವಾರ ತ್ರಿಶೂಲಂ ಧಾರ್ಮಿಕ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಉಚಿತವಾಗಿ ಸಮವಸ್ತ್ರ, ನೋಟ್ ಬುಕ್ ಹಾಗೂ ಸಿಹಿ ವಿತರಿಸಿ ಮಾತನಾಡಿದರು.
ನಮ್ಮ ಸುತ್ತಮುತ್ತ ಪರಿಸರದಲ್ಲಿ ಹಲವು ಜನರು ಆಹಾರ, ಅನಾರೋಗ್ಯ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ಅಂತವರನ್ನು ಗುರುತಿಸಿ ಸಹಾಯ ಮಾಡುವುದು ಹಾಗೂ ದಾನಿಗಳಿಂದ ಅನುಕೂಲ ಕಲ್ಪಿಸಬೇಕೆಂಬ ಹಂಬಲದಿಂದ ಸೇವಾ ಸಂಸ್ಥೆ ಆರಂಭಿಸಲಾಗಿದೆ ಎಂದರು.
ಮೊದಲ ಹಂತವಾಗಿ ಸೇವಾ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ಹಾಗೂ ನೋಟ್‌ಬುಕ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಧಾರ್ಮಿಕ ಹಾಗೂ ಸಮಾಜಮುಖಿಯಾಗಿ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶವಿದೆ ಎಂದರು.
ಪ್ರಪಂಚದಲ್ಲಿ ಜ್ಞಾನಕ್ಕೆ ಮಿಗಿಲಾಗಿದ್ದು ಯಾವುದು ಇಲ್ಲ ಇದನ್ನರಿತು ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಉನ್ನತ ಸ್ಥಾನಗಳಿಸಿ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು. ಪಾಲಕರಿಗೆ, ಗುರು, ಹಿರಿಯನ್ನು ಗೌರವಿಸುವ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತದೆ. ಜತೆಗೆ ಉತ್ತಮ ಶಿಕ್ಷಕರು ಇರುವುದರಿಂದ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಬಿ.ಕಿರಣ್ ಮಾತನಾಡಿ, ಡಾ.ರಾಘವೇಂದ್ರರಾವ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆ ಮಾಡುವ ಜತೆಗೆ ಸೇವಾ ಸಂಸ್ಥೆಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
7 ನೇ ತರಗತಿ ವಿದ್ಯಾರ್ಥಿನಿ ಎಂ.ಆರ್.ದರ್ಶಿನಿ ಮಾತನಾಡಿ, ಡಾ.ರಾಘವೇಂದ್ರ ರಾವ್ ಅವರು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಹಾಗೂ ನೋಟ್‌ಬುಕ್‌ಗಳನ್ನು ವಿತರಣೆ ಮಾಡಿರುವುದು ಸಂತೋಷ ಎಂದರು.
ಮುಖಂಡರಾದ ಮಮತಾರಾಂಖ, ಮುಖ್ಯ ಶಿಕ್ಷಕಿ ಎಚ್.ವಿಜಯಲಕ್ಷ್ಮೀ, ಎಸ್‌ಡಿಎಂಸಿ ಅಧ್ಯಕ್ಷ ನವೀನ್‌ಕುಮಾರ್, ಸದಸ್ಯರಾದ ಶೇಖರ್, ಸೋಮಶೇಖರ್, ರಮೇಶ್, ರಾಮಚಂದ್ರ, ಚನ್ನಯ್ಯ, ಸಹ ಶಿಕ್ಷಕರಾದ ಮಹೇಶ್, ಮಂಜುಳ, ಶ್ರುತಿ ಇದ್ದರು.