ತ್ರಿನೇತ್ರ ಮಹಂತ ಶ್ರೀಗಳ ಸಾಧನೆ ಶ್ಲಾಘನೀಯ

SRP_27-03jpg
Published on

ಶ್ರೀರಂಗಪಟ್ಟಣ: ಜಲಯೋಗ ಸಾಧನೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪಿಎಚ್.ಡಿ ಪಡೆದಿರುವ ತ್ರಿನೇತ್ರ ಮಹಂತ ಶ್ರೀಗಳ ಸಾಧನೆ ಹಾಗೂ ಶ್ರೀಮಠದ ರಜತೋತ್ಸವವನ್ನು ಸಮಾಜದ ಒಳಿತಿಗಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೈಸೂರಿನ ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.


ಪಟ್ಟಣ ಹೊರ ವಲಯದ ಪೂರ್ವವಾಹಿನಿಯ ಚಂದ್ರವನ ಆಶ್ರಮದ ಆವರಣದಲ್ಲಿ ಶನಿವಾರ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಶ್ರೀತ್ರಿನೇತ್ರ ಅಂತಾರಾಷ್ಟ್ರೀಯ ಯೋಗ ಅಧ್ಯಯನ ಕೇಂದ್ರದ 3ನೇ ವರ್ಷದ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ಚಂದ್ರವನ ಆಶ್ರಮ ಕೇವಲ ಧಾರ್ಮಿಕ ವಿಚಾರಗಳಿಗೆ ನೆಲೆಯಾಗದೆ ಸಾಮಾಜಿಕ ಸುಧಾರಣೆ ಹಾಗೂ ಶೈಕ್ಷಣಿಕ ಕ್ರಾಂತಿಗೆ ನಾಂದಿಯಾಗಿದೆ. ಡಾ.ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳು ಸ್ವಾಮಿ ವಿವೇಕಾನಂದರ ತೇಜಸ್ಸು ಉಳ್ಳವರಾಗಿದ್ದು, ಅವರಂತೆಯೇ ಉತ್ಸಾಹ ಹಾಗೂ ಜನರನ್ನು ಸರಿದಾರಿಗೆ ಕೊಂಡೊಯ್ಯುವ ಮನಸ್ಥಿತಿಯುಳ್ಳವರಾಗಿದ್ದಾರೆ. ಇತ್ತೀಚೆಗೆ ಅವರು ಜಲಯೋಗದಲ್ಲಿ ವಿಶೇಷ ಸಾಧನೆ ಮಾಡಿರುವ, ವಿಶ್ವದಲ್ಲೇ ಪ್ರಥಮ ಬಾರಿಗೆ ಪಿಎಚ್.ಡಿ ಪದವಿ ಗಳಿಸಿದ್ದಾರೆ. ಜಲಯೋಗದಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತದೆ. ಶ್ರೀಗಳು ಜಲಯೋಗದ ತಮ್ಮ ಸಾಧನೆಯನ್ನು ವಿದ್ಯಾರ್ಥಿಗಳಿಗೂ ಶಿಕ್ಷಣದ ಮೂಲಕ ಕಲಿಸಿ ಉತ್ತೇಜಿಸಿ ಯೋಗ ಹಾಗೂ ಜ್ಯೋತಿಷ್ಯಗಳ ಕಲಿಕೆಗೆ ವಿದ್ಯಾರ್ಥಿಗಳಿಗೆ ನೆಲೆ ತೋರಿದ್ದಾರೆ ಎಂದರು.


ಸಾನ್ನಿಧ್ಯ ವಹಿಸಿದ್ದ ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳು ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ತಮಕೂರಿನ ಚಿಕ್ಕಪೇಟೆಯ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅಧ್ಯಯನ ಸಮಗ್ರ ಆರೋಗ್ಯ ಟ್ರಸ್ಟ್‌ನ ಸಂಸ್ಥಾಪಕ ಡಾ.ಯೋಗಿ ದೇವರಾಜ್ ಯೋಗ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಯುಎಸ್‌ಎ-ಇಂಡಿಯಾ ಸ್ಕೋಪ್ ಫೌಂಡೇಷನ್ ಅಧ್ಯಕ್ಷ ಡಾ.ಎಲ್.ಎನ್ ಮೂರ್ತಿ ಹಲ್ಲೆಗೆರೆ ಆಗಮಿಸಿದ್ದರು. ತ್ರಿನೇತ್ರ ಅಂತಾರಾಷ್ಟ್ರೀಯ ಯೋಗ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಎನ್.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net