

ಬೇಲೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಬೇಲೂರು ಬ್ಲಾಕ್ ಕಾಂಗ್ರೆಸ್‌ನಿಂದ ಬೇಲೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಬಿ.ಶಿವರಾಂ ನೇತೃತ್ವದಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಸಚಿವ ಬಿ.ಶಿವರಾಂ ಮಾತನಾಡಿ, ಅಜಾತಶತ್ರು ನೇರ ನುಡಿಯ ವ್ಯಕ್ತಿತ್ವ ಹೊಂದಿದ್ದ ಹಾಗೂ ಎಲ್ಲ ಪಕ್ಷದ ಹಿರಿಯ ಮುತ್ಸದ್ದಿಗಳ ಜತೆ ಒಡನಾಟ, ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದ ಸ್ವಚ್ಛ ರಾಜಕಾರಣಿ ಆಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಅಗಲಿರುವುದು ರಾಜ್ಯ ಮಾತ್ರವಲ್ಲದೆ ದೇಶಕ್ಕೆ ನಷ್ಟ ಉಂಟಾಗಿದೆ. ಅವರ ರಾಜಕೀಯ ಏಳುಬೀಳಿನಲ್ಲಿ ಹಲವು ಮೈಲಿಗಲ್ಲನ್ನು ಕಂಡರೂ ಉತ್ತಮ ಆಡಳಿತದ ಮೂಲಕ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರು ಬಡವರ್ಗದವರ ಮೇಲೆ ಇಟ್ಟಿದ್ದ ಕಾಳಜಿ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್ ಮಾತನಾಡಿ, ಯುವಕರ ದಾರಿ ದೀಪವಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎ.ಕೃಷ್ಣ ಅವರ ರಾಜಕೀಯ ತಂತ್ರಗಾರಿಕೆಯಲ್ಲಿ ಪಕ್ಷ ಬಲಿಷ್ಟವಾಗಿತ್ತು. ಅವರ ಮಾರ್ಗದರ್ಶನದಲ್ಲಿ ಯುವಕರು ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಸ್ಥಾನ ಗಳಿಸುತ್ತಿದ್ದರು. ಕೇಂದ್ರ ಮಂತ್ರಿಗಳಾಗಿ, ರಾಜ್ಯಪಾಲರಾಗಿ ತಮ್ಮ ಕೊನೆಯ ಕಾಲಘಟ್ಟದವರೆಗೂ ರಾಜಕೀಯದಲ್ಲಿ ಶ್ರೀ ಕೃಷ್ಣನಂತೆ ನಿಂತು ಕೆಲಸ ಮಾಡಿದ್ದಾರೆ ಎಂದರು.
ರಾಜ್ಯ ಸಫಾಯಿ ಕರ್ಮ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಸದಸ್ಯ ಬಿ.ಗಿರೀಶ್, ಅಕ್ರಂ, ಅಶೋಕ್, ಕೆಡಿಪಿ ಸದಸ್ಯ ನಂದೀಶ್, ಚೇತನ್, ಮುಖಂಡ ಪ್ರದೀಪ್, ರವೀಶ್, ಬಾಬು ಮಲ್ಲಿಕಾ, ಗೋಪಿನಾಥ್, ಚಂದ್ರಶೇಖರ್, ವಿಜಿಕುಮಾರ್ ಇತರರಿದ್ದರು.