ಕೆರೆಗಳಲ್ಲಿ ಮೀನುಗಾರಿಕೆ ಅವ್ಯಾಹತ!

fishing-at-lake-koktak-manipur-india
Published on

* ಟೆಂಡರ್ ಆಗದಿದ್ದರೂ ಮೀನು ಹಿಡಿಯುವವರಿಗಿಲ್ಲ ಅಡೆತಡೆ

*ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ

* ಪೊಲೀಸರ ಮೊರೆ ಹೋದ ಇಲಾಖೆ ಅಧಿಕಾರಿಗಳು

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತಾಲೂಕಿನ ಕೆರೆಗಳಲ್ಲಿ ಅಕ್ರಮ ಮೀನುಗಾರಿಕೆಗೆ ಕಡಿವಾಣ ಹಾಕಲು ಮೀನುಗಾರಿಕೆ ಇಲಾಖೆ ಪೊಲೀಸರ ಮೊರೆ ಹೋಗಿದೆ.

ಹೌದು..! ಏತನೀರಾವರಿ ಯೋಜನೆಗಳ ಅನುಷ್ಠಾನದಿಂದ ಇತರ ತಾಲೂಕುಗಳಿಗೆ ಹೋಲಿಸಿದರೆ ಚನ್ನಪಟ್ಟಣ ತಾಲೂಕಿನ ಕೆರೆಗಳು ಸಮೃದ್ಧವಾಗಿವೆ. ಕೆರೆಗಳ ಒಡಲು ತುಂಬಿರುವ ಹಿನ್ನೆಲೆಯಲ್ಲಿ ಮತ್ಸ್ಯ ಉದ್ಯಮ (ಮೀನುಗಾರಿಕೆ) ಪ್ರಗತಿಯಲ್ಲಿದೆ. ಆದರೆ, ಸದ್ಯ ಈ ಮೀನುಗಾರಿಕೆಯಿಂದ ಇಲಾಖೆ ಸೇರಿ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಲಾಭ ಇಲ್ಲ ಎನ್ನುವುದು ವೈರುಧ್ಯ.

ತಾಲೂಕಿನ ಯಾವ ಕೆರೆಗಳಿಗೂ ಪ್ರಸುತ್ತ ಮೀನುಗಾರಿಕೆ ಹಕ್ಕು ಇಲ್ಲವಾಗಿದ್ದು, ಕೆರೆಗಳಲ್ಲಿನ ಮೀನುಗಳನ್ನು ಕೆಲವರು ಅಕ್ರಮವಾಗಿ ಹಿಡಿಯುತ್ತಿದ್ದಾರೆ. ಇದರಿಂದ ಸರ್ಕಾರ ಹಾಗೂ ಇಲಾಖೆಗೆ ಲಕ್ಷಾಂತರ ರೂ. ನಷ್ಟವಾಗುತ್ತಿದ್ದು, ಕೆರೆಗಳಲ್ಲಿನ ಮೀನು ಕಾಪಾಡಿಕೊಳ್ಳಲು ಮತ್ತು ಅಧಿಕೃತ ಮೀನುಗಾರಿಕೆಗೆ ಅವಕಾಶ ಕಲ್ಪಿಸಲು ಇಲಾಖೆ ಪೊಲೀಸರ ಮೊರೆ ಹೋಗಿದೆ.

ಯಾವ ಕೆರೆಯೂ ಟೆಂಡರ್ ಆಗಿಲ್ಲ!

ಕಣ್ವ ಜಲಾಶಯವೂ ಸೇರಿ ತಾಲೂಕಿನ 30 ಕೆರೆಗಳು ಮೀನುಗಾರಿಕೆ ಇಲಾಖೆ ಸುಪರ್ದಿಯಲ್ಲಿವೆ. ಕೂಡ್ಲೂರು, ಹೊಂಗನೂರು, ಮಳೂರುಪಟ್ಟಣ, ಸುಳ್ಳೇರಿ, ಬೇವೂರು, ಎಂ.ಬಿ.ಹಳ್ಳಿ, ನೀಲಸಂದ್ರ, ದೊಡ್ಡಮಳೂರು, ರಾಮಮ್ಮನ ಕೆರೆ, ಸೋಗಾಲ, ನೇರಳೂರು, ಬಿ.ವಿ.ಹಳ್ಳಿ, ಮೋಗೇನಹಳ್ಳಿ, ಹರೂರು ಸೇರಿ 30 ಕೆರೆಗಳಲ್ಲಿ ಮೀನುಗಾರಿಕೆಯ ಅಧಿಕಾರ ಯಾರಿಗೂ ಇಲ್ಲ. ಕಳೆದ ಒಂದು ವರ್ಷದಿಂದ ಯಾವ ಕೆರೆಗಳಿಗೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಆದರೆ, ವಾಸ್ತವಾಂಶ ಮುಚ್ಚಿ ಬಹುತೇಕ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಒಂದೆಡೆ ಸರ್ಕಾರಕ್ಕೆ ನಷ್ಟವಾದರೆ, ಮತ್ತೊಂದೆಡೆ, ಕೆಲ ಬಲಾಢ್ಯರು ಅಕ್ರಮವಾಗಿ ಹಣ ಮಾಡುತ್ತಿದ್ದಾರೆ.

ಪೊಲೀಸರಿಗೆ ದೂರು!

ಸರ್ಕಾರದ ನಿಯಮದಂತೆ ಕೆರೆಗಳಲ್ಲಿ ಮೀನುಗಾರಿಕೆ ಕೈಗೊಳ್ಳುವ ಹಕ್ಕನ್ನು ಐದು ವರ್ಷದ ಅವಧಿಗೆ ಟೆಂಡರ್ ನೀಡಲಾಗುತ್ತದೆ. ಟೆಂಡರ್‌ದಾರರು ಪ್ರತಿವರ್ಷ ನವೀಕರಣ ಮಾಡಿಕೊಂಡು ಮೀನುಗಾರಿಕೆ ನಡೆಸಬೇಕು. ಆದರೆ, ಪ್ರಸ್ತುತ ತಾಲೂಕಿನ ಯಾವ ಕೆರೆಗಳಿಗೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಆದರೆ, ಎಲ್ಲ ಕೆರೆಗಳಲ್ಲೂ ಈ ಹಿಂದಿನಂತೆಯೇ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮೀನುಗಾರಿಕೆ ಇಲಾಖೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಎಲ್ಲ ಠಾಣೆಗಳಲ್ಲೂ ದೂರು ದಾಖಲಿಸಿದೆ. ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆ ನಡೆಸುವವರ ವಿರುದ್ಧ ನಿಗಾವಹಿಸುವಂತೆ ಹಾಗೂ ಕ್ರಮಜರುಗಿಸುವಂತೆ ದೂರಿನ ಮೂಲಕ ಮನವಿ ಮಾಡಿದೆ.

ಬೊಕ್ಕಸಕ್ಕೆ ಲಕ್ಷಾಂತರ ರೂ ನಷ್ಟ!

ತಾಲೂಕಿನಲ್ಲಿ ಮೀನುಗಾರಿಕೆ ನಡೆಸಲು ಉತ್ತಮ ಅವಕಾಶ ಇರುವ ಹಿನ್ನೆಲೆಯಲ್ಲಿ ಇಲ್ಲಿಯ ಕೆರೆಗಳ ಮೀನುಗಾರಿಕೆ ಹಕ್ಕು ಪಡೆಯಲು ಪೈಪೋಟಿ ಇರುತಿತ್ತು. ಕೆಲ ಕೆರೆಗಳು ಲಕ್ಷಾಂತರ ರೂ.ಗೆ ಟೆಂಡರ್ ಆಗಿರುವ ಉದಾಹರಣೆಗಳಿವೆ. ಮೀನುಗಾರಿಕೆ ಹರಾಜಿನಿಂದ ಇಲಾಖೆಗೆ ವಾರ್ಷಿಕ ಲಕ್ಷಾಂತರ ರೂ. ಆದಾಯವಿತ್ತು. ಆದರೆ, ಏತನೀರಾವರಿ ಯೋಜನೆಗೆ ಒಳಪಡುವ ತಾಲೂಕುಗಳಲ್ಲಿ ಮೀನುಗಾರಿಕೆ ಹರಾಜಿಗೆ ಸಂಬಂಧಿಸಿದಂತೆ ಕೆಲ ನಿಯಮಾವಳಿ ಇರುವ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯ ವಿಚಾರ ಸದ್ಯ ಸರ್ಕಾರದ ಮಟ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಸಾಲಿನಲ್ಲೂ ಹರಾಜು ನಡೆಸಲು ಸಾಧ್ಯವಾಗಿಲ್ಲ. ಈಗಲಾದರೂ, ಸರ್ಕಾರ ಈ ವಿಚಾರವಾಗಿ ಕ್ರಮಕೈಗೊಂಡರೆ ತಾಲೂಕಿನ ಎಲ್ಲ ಕೆರೆಗಳಿಗೆ ಹರಾಜು ನಡೆಸಿ, ಆದಾಯ ನೋಡಬಹುದು.

ಅಕ್ರಮ ಮಾಮೂಲು

ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕೆರೆ ಹಾಗೂ ಕಟ್ಟೆಗಳು ಆಯಾ ಗ್ರಾಪಂ ವ್ಯಾಪ್ತಿಗೆ ಬರಲಿವೆ. ಇವುಗಳಲ್ಲಿ ಮೀನುಗಾರಿಕೆ ನಡೆಸಲು ಸಂಬಂಧಿಸಿದ ಗ್ರಾಪಂ ಮಟ್ಟದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಆದರೆ, ಇಲ್ಲೂ ಅಕ್ರಮಗಳು ಮಾಮೂಲಾಗಿವೆ. ಅವಧಿ ಮೀರಿದರೂ ಮೀನಿನ ಮರಿಗಳನ್ನು ಬಿಟ್ಟು ಮೀನುಗಾರಿಕೆ ನಡೆಸುವುದು ಸಾಮಾನ್ಯ ಎನಿಸಿದೆ. ಸರ್ಕಾರದ ಬೊಕ್ಕಸಕ್ಕೆ ನಯಾಪೈಸೆ ಲಾಭ ಇಲ್ಲದ ಈ ಪ್ರಕ್ರಿಯೆಯಲ್ಲಿ ಸ್ಥಳೀಯ ಅಧಿಕಾರಿಗಳು ಪಾಲುದಾರರಾಗಿದ್ದಾರೆ ಎಂಬ ಆರೋಪವಿದೆ. ಇನ್ನುಳಿದಂತೆ ಕೆಲ ಸಣ್ಣ ಕೆರೆ ಹಾಗೂ ಕಟ್ಟಡಗಳಲ್ಲಿ ಹರಾಜು ಎನ್ನುವ ವಿಚಾರವೇ ಇಲ್ಲ ಎನ್ನಬಹುದು. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ, ಆಯಾ ಗ್ರಾಪಂಗಳ ಕೆರೆ ಹಾಗೂ ಕಟ್ಟೆಗಳಲ್ಲಿ ಇಲ್ಲಿಯವರೆಗೂ ನಡೆದಿರುವ ಹರಾಜು ಪ್ರಕ್ರಿಯೆಗಳ ಮಾಹಿತಿ ಪಡೆದರೆ, ಅಕ್ರಮಗಳು ಹೊರಬೀಳಲಿವೆ.

ಕಣ್ವ ಜಲಾಶಯ ಸೇರಿ ಚನ್ನಪಟ್ಟಣ ತಾಲೂಕಿನಲ್ಲಿ ಇಲಾಖೆ ವ್ಯಾಪ್ತಿಯಲ್ಲಿ 30 ಕೆರೆಗಳಿವೆ. ಈ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಯಾರಿಗೂ ಹಕ್ಕಿಲ್ಲ. ಯಾವ ಕೆರೆಗಳಿಗೂ ಟೆಂಡರ್ ಆಗಿಲ್ಲ. ಆದರೂ ಹಲವು ಕೆರೆಗಳಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಇಲಾಖೆಗೆ ಸಂಬಂಧಿಸಿದ ಕೆರೆಗಳಲ್ಲಿ ಮೀನುಗಾರಿಕೆ ನಡೆಸುವವರ ಬಗ್ಗೆ ಸಾರ್ವಜನಿಕರು ಇಲಾಖೆ ಅಥವಾ ಠಾಣೆಗೆ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ.ಮಹಾಂತೇಶ್, ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ ಚನ್ನಪಟ್ಟಣತಾಲೂಕಿನ ಯಾವ ಕೆರೆಗಳಿಗೂ ಮೀನುಗಾರಿಕೆ ನಡೆಸುವ ಹರಾಜು ಪ್ರಕ್ರಿಯೆ ನಡೆದಿಲ್ಲ. ಆದರೂ, ಕೆಲ ಬಲಾಢ್ಯರು ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಸರ್ಕಾರ ಹಾಗೂ ಇಲಾಖೆ ಹಾಗೂ ಸಾರ್ವಜನಿಕರಿಗೆ ಮಣ್ಣು ಎರಚಿ ರಾಜಾರೋಷವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಲ್ಲಿ ಪ್ರಭಾವಿಗಳ ಬೆಂಬಲಿಗರೂ ಇದ್ದಾರೆ. ಇಂತಹ ಅಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸುವುದು ಒಳ್ಳೆಯದು.ನಟರಾಜ್ಚನ್ನಪಟ್ಟಣ ಸಾರ್ವಜನಿಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net