ಅಪಾಯದ ಮುನ್ಸೂಚನೆ ನೀಡುತ್ತಿವೆ ಮರಗಳು, ಕೆಲವು ಮಾರ್ಗಗಳಲ್ಲಿ ಬಸ್​ಗೆ ತಾಗುವಂತೆ ಬಾಗಿದ ವೃಕ್ಷಗಳು

31sdp1- tree
Published on

ಸಿದ್ದಾಪುರ: ಒಂದೆಡೆ ಗಾಳಿ-ಮಳೆಯಿಂದ ಎಲ್ಲೆಂದರೆಲ್ಲಿ ಗಿಡಮರಗಳು ಬಿದ್ದು ಹಾನಿ ಸಂಭವಿಸಿದೆ. ಇನ್ನು ತಾಲೂಕಿನ ಹಲವೆಡೆ ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶಗಳ ಮುಖ್ಯ ರಸ್ತೆಗೆ ದೊಡ್ಡ ದೊಡ್ಡ ಮರಗಳು ಅಡ್ಡವಾಗಿ ಬಾಗಿಕೊಂಡಿದ್ದು, ಅಪಾಯ ಸಂಭವಿಸುವ ಮುನ್ಸೂಚನೆ ನೀಡುತ್ತಿವೆ.
ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಈಗ ಸಂಚಾರ ಮಾಡುವುದು ಕಷ್ಟಕರವಾಗಿದೆ. ಯಾವ ಕ್ಷಣದಲ್ಲಿ ಮರಗಳು ಬೀಳುತ್ತದೆ ಎನ್ನುವ ಆತಂಕದಲ್ಲಿಯೇ ವಾಹನ ಸವಾರರು ಸಂಚರಿಸುವ ಸ್ಥಿತಿ ಉಂಟಾಗಿದೆ.

ಕೋಲಸಿರ್ಸಿ- ಹಾರ್ಸಿಕಟ್ಟಾ- ಗೋಳಿಮಕ್ಕಿ ರಸ್ತೆ, ಹೇರೂರು- ಸರಕುಳಿ ರಸ್ತೆ, ಸಿದ್ದಾಪುರ- ಕುಮಟಾ ರಸ್ತೆ, ಬಿದ್ರಕಾನ- ಬಿಳಗಿ ರಸ್ತೆ, ಮೆಣಸಿ- ಲಂಬಾಪುರ ರಸ್ತೆ, ಸಿದ್ದಾಪುರ- ಶಿರಸಿ ರಸ್ತೆಯ ತ್ಯಾಗ್ಲಿ ಕಾನಸೂರು ನಡುವೆ ಹೀಗೆ ಹಲವು ರಸ್ತೆಗಳಲ್ಲಿ ಹಾಗೂ ಎನ್​ಎಚ್ ರಸ್ತೆಯಾಗಿರುವ ಮನಮನೆ- ಜೋಗ, ಮಾವಿನಗುಂಡಿ- ಹೊನ್ನಾವರ ಮಾರ್ಗದಲ್ಲಿ ಅಪಾಯದಲ್ಲಿರುವ ಅಕೇಶಿಯಾ ಹಾಗೂ ಕೆಲವು ಕಾಡುಜಾತಿಯ ಮರಗಳು ರಸ್ತೆಯತ್ತ ಬಾಗಿಕೊಂಡಿವೆ. ಕೆಲವು ಮಾರ್ಗದಲ್ಲಿ ಸಾರಿಗೆ ಬಸ್​ಗಳಿಗೆ ತಾಗುವಂತಿರುವುದರಿಂದ ಚಾಲಕರು ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸುತ್ತಿದ್ದಾರೆ.
ಈಗಾಗಲೇ ಶಾಸಕ ಭೀಮಣ್ಣ ನಾಯ್ಕ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಸೀಲ್ದಾರ್ ಅವರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಪಾಯದಲ್ಲಿರುವ ಮರಗಳನ್ನು ಗುರುತಿಸಿ ತೆರವುಗೊಳಿಸುವಂತೆ ಸೂಚನೆ ನೀಡಿ, ತಿಂಗಳೇ ಕಳೆದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಸಂಬಂಧಪಟ್ಟ ಇಲಾಖೆಗಳು ಏನು ಮಾಡುತ್ತಿದೆ. ಜೀವ ಹಾನಿ ಆದ ಮೇಲೆ ಎಚ್ಚರಗೊಳ್ಳುತ್ತಾರೆಯೇ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ ಅಕ್ಕ- ಪಕ್ಕದಲ್ಲಿ ಅಪಾಯದಂಚಿನಲ್ಲಿರುವ ಮರಗಳನ್ನು ಗುರುತಿಸಿ ಮಾಹಿತಿ ನೀಡುವಂತೆ ಈಗಾಗಲೇ ಸಿದ್ದಾಪುರ ಹಾಗೂ ಕ್ಯಾದಗಿ ವಲಯದ ಆರ್​ಎಫ್​ಒಗಳಿಗೆ ಸೂಚನೆ ನೀಡಲಾಗಿದೆ. ಅಪಾಯದಲ್ಲಿರುವ ಮರಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.| ಪ್ರವೀಣ ಬಸ್ರೂರು, ಎಸಿಎಫ್ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net