

ಬೇಲೂರು: ಗಾಳಿ ಮಳೆಗೆ ತಾಲೂಕಿನ ಕೆಸಗೋಡು-ಆಲೂರು ರಸ್ತೆಯ ಹೊಳಲು ಗ್ರಾಮದ ಗ್ರೀನ್‌ಹುಡ್ ಎಸ್ಟೇಟ್ ಬಳಿ ಬೃಹತ್ ಗಾತ್ರದ ಮರ ರಸ್ತೆಗೆ ಬಿದ್ದಿದ್ದರಿಂದ ಗುರುವಾರ ಸಂಜೆ ವಾಹನ ಸಂಚಾರ ಬಂದ್ ಆಗಿತ್ತು.
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಜತೆಗೆ ಜೋರಾಗಿ ಗಾಳಿ ಬೀಸುತ್ತಿದ್ದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಗುರುವಾರ ಸಂಜೆ ಆಲೂರು-ಕೆಸಗೋಡು-ಬೇಲೂರು ಸಂಪರ್ಕ ಕಲ್ಪಿಸುವ ಕೆಸಗೋಡು ಸಮೀಪದ ಹೊಳಲು ಗ್ರಾಮದ ಗ್ರೀನ್‌ಹುಡ್ ಎಸ್ಟೇಟ್ ಬಳಿ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದಿತ್ತು. ಮರವನ್ನು ಯಾರೂ ತೆರವು ಮಾಡಲು ಮುಂದಾಗದ ಕಾರಣ ವಾಹನ ಸವಾರರು ಪರದಾಡಿದರು.
ಶುಕ್ರವಾರ ಬೆಳಗ್ಗೆ ಹಾಸನದಿಂದ ಆಲೂರು-ಕೆಸಗೋಡು-ಬಿಕ್ಕೋಡು ಮಾರ್ಗವಾಗಿ ಬೇಲೂರಿಗೆ ಬರುವ ಕೆಎಸ್‌ಆರ್‌ಟಿಸಿ ಬಸ್ ಕೆಸಗೋಡಿನವರೆಗೂ ಬಂದು ವಾಪಸ್ ತೆರಳಿತು. ಇದರಿಂದ ಈ ಭಾಗದ ಸುತ್ತಲ ಪ್ರಯಾಣಿಕರು ಆಲೂರು, ಬೇಲೂರು, ಬಿಕ್ಕೋಡಿಗೆ ತೆರಳಲು ತೊಂದರೆಯಾಯಿತು. ನಂತರ ಕೆಸಗೋಡು ಗ್ರಾಮದ ಲೋಕೇಶ್ ಮತ್ತು ತಂಡದವರು ಮರವನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತೆರವು ಕಾರ್ಯಾಚರಣೆ ವೇಳೆ ಕೆಸಗೋಡು ಶಾಲೆ ಶಿಕ್ಷಕ ಸಂಪತ್, ಗ್ರಾಮಸ್ಥರಾದ ಗೋವಿಂದ, ಪಾಪ, ಕಿಟ್ಟಿ, ಹೊಳಲು ಗ್ರಾಮದ ಯೋಗೇಂದ್ರಗೌಡ, ನೂತನ್ ಇದ್ದರು.