

ಕಟೀಲು: ಕೊಂಡೇಲ ಶ್ರೀ ಕೊಂಡೇಲ್ತಾಯ ದೈವಸ್ಥಾನಕ್ಕೆ ಸಂಬಂಧಿಸಿದ ಸಿರಿಗೋಳಿ ಮರ ಬುಧವಾರ ರಾತ್ರಿ ಸುರಿದ ಗಾಳಿ ಮಳೆಗೆ ಬುಡ ಸಮೇತ ಉರುಳಿದೆ.
ವಿಶೇಷವೆಂದರೆ ದೈವಸ್ಥಾನ ಪಕ್ಕದಲ್ಲಿದ್ದರೂ ದೈವಸ್ಥಾನದ ಮೇಲೆ ಬೀಳದೆ, ದೈವಸ್ಥಾನ ಮತ್ತು ಮೂಲ ಮಾನವ ರೂಪದ ಕಲ್ಲಿನ ಮಧ್ಯೆ ಈ ಮರ ಉರುಳಿದೆ. ದೈವದ ಕಾರಣಿಕದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 300 ವರ್ಷ ಪ್ರಾಯದ ಈ ಮರದ ಎಲೆಗಳಿಂದ, ದೈವಸ್ಥಾನದಲ್ಲಿನ ಧಾರ್ಮಿಕ ಕಾರ್ಯಕ್ರಮದ ಸಂದರ್ಭ ದೈವದ ಪ್ರಸಾದ ಕೊಡಲಾಗುತ್ತಿತ್ತು. ಮರ ತೆರವು ಬಗ್ಗೆ ದೈವಜ್ಞರಲ್ಲಿ ವಿಚಾರಿಸಿದ್ದು, ಮುಂದಿನ ಅಮಾವಾಸ್ಯೆ ದಿನ ದೈವಕ್ಕೆ ಪ್ರಾರ್ಥನೆ ಸಲ್ಲಿಸಿ ಮರ ತೆರವುಗೊಳಿಸುವಂತೆ ಸೂಚಿಸಿದ್ದು, ನಂತರ ಇದೇ ಜಾಗದಲ್ಲಿ ಮತ್ತೊಂದು ಸಿರಿಗೋಳಿ ಮರ ನೆಡುವಂತೆ ದೈವಜ್ಞರು ಸೂಚಿಸಿದ್ದಾರೆ ಎಂದು ದೈವಸ್ಥಾನದ ಅಧ್ಯಕ್ಷ ಲೋಕಯ್ಯ ಸಾಲಿಯಾನ್ ಕೊಂಡೇಲ ತಿಳಿಸಿದ್ದಾರೆ.