

ತಿರುವನಂತಪುರ: ಮಿದುಳಿನ ಕ್ಯಾನ್ಸರ್ ಗಡ್ಡೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮೂಲಭೂತ ಬದಲಾವಣೆ ತರಬಹುದಾದ ಮಹತ್ವದ ಸಂಶೋಧನೆಯನ್ನು ಅಮೆರಿಕದಲ್ಲಿ ವಿಜ್ಞಾನಿಗಳು ನಡೆಸಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಫ್ರಾನ್ಸಿಸ್ಕೊ ಮೆಡಿಕಲ್ ಸೆಂಟರ್ನ ವಿಜ್ಞಾನಿಗಳ ಈ ತಂಡಕ್ಕೆ ಭಾರತೀಯ ಮೂಲದ ಸರಿತಾ ಕೃಷ್ಣ ಮುಖ್ಯಸ್ಥರಾಗಿದ್ದಾರೆ.
ಕ್ಯಾನ್ಸರ್ಕಾರಕ ಕೋಶಗಳು ಮಿದುಳಿನ ಆರೋಗ್ಯಪೂರ್ಣ ಕೋಶಗಳನ್ನು ಸಂರ್ಪಸಿ, ಅವು ಅಧಿಕ ಕ್ರಿಯಾಶೀಲಗೊಳ್ಳುವಂತೆ (ಹೈಪರ್ಆಕ್ಟಿವಿಟಿ) ಮಾಡುವ ಮೂಲಕ ಅರಿವಿನ ಶಕ್ತಿಯನ್ನು ತ್ವರಿತವಾಗಿ ನಷ್ಟ ಮಾಡುತ್ತವೆ. ಇದರಿಂದ ರೋಗಿಯ ಮರಣಿಸುವ ಸಂಭವವೂ ಇದೆ ಎಂಬುದನ್ನು ಈ ತಂಡ ಸಂಶೋಧಿಸಿದೆ. ಮಿದುಳು ಕ್ಯಾನ್ಸರ್ ಗುಣಪಡಿಸಲು ಸಾಮಾನ್ಯವಾಗಿ ಬಳಸಲಾಗುವ ಆಂಟಿ-ಸೀಜರ್ ಔಷಧ ಮಿದುಳಿನ ಗಡ್ಡೆಯ ಕೋಶಗಳ ಹೈಪರ್ಆಕ್ಟಿವಿಟಿ ಕಡಿಮೆ ಮಾಡುವಲ್ಲಿ ಹಾಗೂ ಬೆಳವಣಿಗೆಯನ್ನು ತಡೆಯುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಸರಿತಾ ಕೃಷ್ಣ ನೇತೃತ್ವದ ತಂಡ ಕಂಡುಕೊಂಡಿದೆ. ಮಿದುಳಿನ ಆರೋಗ್ಯಕರ ಕೋಶಗಳು ಮತ್ತು ಕ್ಯಾನ್ಸರ್ಯುಕ್ತ ಕೋಶಗಳ ನಡುವಿನ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಗಡ್ಡೆಯ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ, ಇಲ್ಲವೇ ಸ್ಥಗಿತಗೊಳಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಮೆಡಿಕಲ್ ಸೆಂಟರ್ನ ಈ ಸಂಶೋಧನಾ ವರದಿ ‘ನೇಚರ್’ ಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಈ ಸಂಶೋಧನೆಯು ಗ್ಲಿಯೋಬ್ಲಾಸ್ಟೋಮಾ ಹೊಂದಿರುವ ರೋಗಿಗಳಿಗೆ ಪ್ರಯೋಜ ನಕಾರಿಯಾಗಲಿದೆ. ಇದು ಮಿದುಳು ಕಾನ್ಸರ್ ಚಿಕಿತ್ಸೆಯಲ್ಲಿ ಪಥದರ್ಶಕ ಆಗಲಿದ್ದು, ಮಾರಣಾಂತಿಕ ಕಾಯಿಲೆ ಯಿಂದ ಬಳಲುತ್ತಿರುವವರಿಗೆ ಆಶಾಕಿರಣವಾಗಲಿದೆ ಎಂದು ಸಂಶೋಧಕರ ತಂಡ ಅಭಿಪ್ರಾಯ ಪಟ್ಟಿದೆ. ಕೇರಳದ ತಿರುವನಂತಪುರ ಮೂಲದವರಾದ ಸರಿತಾ ಕೃಷ್ಣಾ ಅವರೊಂದಿಗೆ ವಿಜ್ಞಾನಿ ಶಾನ್ಹೆರ್ವೆ- ಜಂಪರ್ ಮತ್ತು ಇನ್ನಿತರರು ಕೈಜೋಡಿಸಿದ್ದರು.
ಎಚ್ಚರವಿರುವಾಗಿನ ಮಿದುಳಿನ ಶಸ್ತ್ರಚಿಕಿತ್ಸೆ ವೇಳೆ ಭಾಷಾ ಟಾಸ್ಕ್ಗಳನ್ನು ನೀಡಿದಾಗ ಗಡ್ಡೆಯುಕ್ತ ಮಿದುಳಿನ ಭಾಗಗಳಲ್ಲಿ ಕ್ರಿಯಾಶೀಲತೆಯನ್ನು ಗಮನಿಸಲಾಗಿದೆ. ಈ ಭಾಗವು ಭಾಷಾ ಮಿದುಳು ವಲಯಗಳಿಂದ ಬಹಳ ದೂರವಿರುತ್ತವೆ ಎಂದು ಸರಿತಾ ಕೃಷ್ಣ ವಿವರಿಸಿದ್ದಾರೆ.