

ಶಿರಸಿ: ಮಕ್ಕಳು ಶಾಲೆ ಬಿಟ್ಟು ಬರುವ ಸಮಯವಾಯಿತೆಂದರೆ ಈ ಗ್ರಾಮದ ಪಾಲಕರಿಗೆ ಆತಂಕ ಆರಂಭವಾಗುತ್ತದೆ. ಮಕ್ಕಳನ್ನು ಕರೆತರಲು ದೌಡಾಯಿಸಿ ಶಾಲೆಯತ್ತ ಓಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಶಾಲಾ ಮಾರ್ಗದ ಮಧ್ಯೆ ಇರುವ ಭಯಾನಕ ಮರದ ದಿಮ್ಮಿಯ ಕಾಲು ಸಂಕ !
ತಾಲೂಕಿನ ಮತ್ತಿಘಟ್ಟದ ಕೆಳಗಿನ ಕೇರಿಯಲ್ಲಿ ಜನತೆ ಇನ್ನೂ ಕುಗ್ರಾಮದ ಸ್ಥಿತಿಯ ಬದುಕು ಕಳೆಯುತ್ತಿದ್ದಾರೆ. ಮುಗಿಲೆತ್ತರದ ಬೆಟ್ಟಗಳ ಮಧ್ಯೆ ಸಣ್ಣ ಸಣ್ಣ ಮನೆಗಳನ್ನು ನಿರ್ವಿುಸಿಕೊಂಡು ಅಲ್ಪ ಸ್ವಲ್ಪ ಕೃಷಿಯಿಂದ ಜೀವನ ನಡೆಸುತ್ತಿರುವ ಇಲ್ಲಿಯ ಜನತೆಗೆ ಆಗಬೇಕಾದ ಕಾಮಗಾರಿಗಳನ್ನು ಮಾಡಿಕೊಡುವವರಿಲ್ಲ.
ರಸ್ತೆ ಇನ್ನಿತರ ಮೂಲ ಸೌಕರ್ಯಕ್ಕಾಗಿ ಸ್ಥಳೀಯರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುತ್ತಾರಾದರೂ ಗ್ರಾಮ ಪಂಚಾಯಿತಿ ಅನುದಾನಗಳೆಲ್ಲ ಇಲ್ಲಿಯ ಬೃಹತ್ ಸಮಸ್ಯೆಗಳಿಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಆಡಳಿತ ನಡೆಸುವವರು ವಿಶೇಷ ಪ್ಯಾಕೇಜ್ ಮೂಲಕವೇ ಇಲ್ಲಿಯ ಅಭಿವೃದ್ಧಿ ಕಾರ್ಯ ನಡೆಸಬೇಕಾದರೂ ಇಲ್ಲಿ ಮತದಾರರ ಸಂಖ್ಯೆ ಕಡಿಮೆ ಇರುವುದು ಅವರಿಗೂ ಸಮಸ್ಯೆಯಾಗಿದೆ. ಹೀಗಾಗಿ ಇಲ್ಲಿಯ ಬದುಕು ಬವಣೆಗೆ, ಬೇಡಿಕೆಗಳ ಪಟ್ಟಿಗೆ ಜನಪ್ರತಿನಿಧಿಗಳಿಂದ ಮೌನವೇ ಉತ್ತರವಾಗಿರುತ್ತದೆ. ಯಾವುದೂ ಈಡೇರದಿದ್ದಾಗ ಗ್ರಾಮಸ್ಥರೇ ಸ್ವತಃ ಶ್ರಮ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಮತ್ತಿಘಟ್ಟ ಕೆಳಗಿನ ಕೇರಿಯ ಹುಲಿದೇವರಮನೆ ಬಳಿಯ ಹಸೆಹಳ್ಳ ಹೊಳೆಯ ಸೇತುವೆ ಇದಕ್ಕೊಂದು ಸಾಕ್ಷಿ. ಇಲ್ಲಿಯ ಮಾನಮನೆ, ಉಂಬಳಕೇರಿ, ಗುಂಡಪ್ಪೆ, ನರಸೇಬೈಲ್ ಭಾಗದವರಿಗೆ ಮತ್ತಿಘಟ್ಟಕಕ್ಕೆ ಬಂದು ಬಸ್ ಹತ್ತಬೇಕೆಂದರೆ ಈ ಕಾಲು ಸಂಕದ ಮೂಲಕ ಸಾಗಿದರೆ ಮಾತ್ರ ಸನಿಹದ ದಾರಿ. ಇಲ್ಲದಿದ್ದರೆ ಕಡಿದಾದ ಏರಿನಲ್ಲಿ ಏದುಸಿರು ಬಿಡುತ್ತ 7 ಕಿ.ಮೀ. ಹೆಚ್ಚು ಸುತ್ತಿ ಮತ್ತಿಘಟ್ಟಕ್ಕೆ ಬರಬೇಕು. ಅನಿವಾರ್ಯವಾಗಿ ಹಸೆಹಳ್ಳಕ್ಕೆ ಗ್ರಾಮಸ್ಥರೇ ಮರದ ದಿಮ್ಮಿ ಹಾಕಿ ದಾಟುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತಿ ದಿನ 9ಕ್ಕೂ ಅಧಿಕ ಶಾಲಾ ಮಕ್ಕಳು, 100ಕ್ಕೂ ಅಧಿಕ ಸಾರ್ವಜನಿಕರು ಇದೇ ಅತಂತ್ರ ಸೇತುವೆ ದಾಟಿ ಮತ್ತಿಘಟ್ಟದ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ಊಟಕ್ಕೆ ಬೇಕಾಗುವ ಅಕ್ಕಿ, ಮೆಣಸಿನ ಹಿಟ್ಟು, ಸಾಸಿವೆಯನ್ನೂ ಇದೇ ಸಂಕದ ಮೂಲಕ ದಾಟಿ ಮತ್ತಿಘಟ್ಟದ ಸಹಕಾರಿ ಸಂಘದಿಂದ ತಂದುಕೊಳ್ಳುತ್ತಿದ್ದಾರೆ. ಮಳೆಗಾಲದ ದಿನಗಳಲ್ಲಿ ಅನಾರೋಗ್ಯ ಪೀಡಿತರನ್ನೂ ಕಂಬಳಿಯಲ್ಲಿ ಕಟ್ಟಿಕೊಂಡು ಇದೇ ಕಾಲು ಸಂಕದಲ್ಲಿ ದಾಟಿಸಿದ್ದಾರೆ.
ಹೊಳೆ ಮಧ್ಯೆ ಇರುವ ಬೃಹತ್ ಮರಗಳೇ ಹಸೆಹಳ್ಳದ ಈ ಕಾಲು ಸಂಕದ ಪ್ರಧಾನ ಕಂಬಗಳು. ಬೇಸಿಗೆಯ ಕೊನೆಯ ದಿನಗಳಲ್ಲಿ ಗ್ರಾಮಸ್ಥರೆಲ್ಲ ಸೇರಿ ಈ ಸಂಕದ ಬರ್ಸಾತ್ ರಿಪೇರಿ ಮಾಡುತ್ತಾರೆ. ತಮ್ಮ ತಮ್ಮ ತೋಟದಲ್ಲಿ ಬೆಳೆದ ಅಡಕೆ ಮರಗಳನ್ನು ತಂದು, ಕಾಡುಬಳ್ಳಿ, ತಂತಿಯನ್ನು ಬಳಸಿಕೊಂಡು ಹೊಳೆ ಮಧ್ಯೆ ಇರುವ ಮರದ ಕೊಂಬೆಗಳಿಗೆ ಇವುಗಳನ್ನು ಜೋಡಿಸಿ ಓಡಾಡುವಂತೆ ಮಾಡುತ್ತಾರೆ. ಕೆಲ ವರ್ಷಗಳ ಹಿಂದೆ ಇಲ್ಲಿಯ ದೇವನಳ್ಳಿ ಗ್ರಾಮ ಪಂಚಾಯಿತಿಯಿಂದ ಕಬ್ಬಿಣದ ಸಲಾಕೆ ನೀಡಲಾಗಿದ್ದು, ಇವುಗಳನ್ನೂ ಕಾಲುಸಂಕದ ಓಡಾಡುವ ಭಾಗದಲ್ಲಿ ಹಾಕಿ ಭದ್ರಪಡಿಸಿಕೊಳ್ಳುತ್ತಿದ್ದಾರೆ. ಬದುಕಿನ ಸಲುವಾಗಿ ಈ ಅತಂತ್ರ ಸೇತುವೆಯನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾರೆ ಇಲ್ಲಿಯ ಜನತೆ !
ಓಡಾಡಲು ಭಯ: ಮಳೆಗಾಲದ ದಿನಗಳಲ್ಲಿ ಜಾರುವ ಈ ಮರದ ದಿಮ್ಮಿಯ ಮೇಲೇ ಇವರ ದೈನಂದಿನ ಓಡಾಟ ನಡೆದಿರುತ್ತದೆ. ಕಂಬಳಿ, ಪ್ಲಾಸ್ಟಿಕ್ ಕೊಪ್ಪೆ ಹೊದ್ದ ಪುಟಾಣಿ ಬಾಲಕರು, ಪಾಲಕರ ಕೈ ಹಿಡಿದುಕೊಂಡು ಇಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಶಾಲೆಗೆ ತೆರಳುತ್ತಿದ್ದಾರೆ. ಹೊಳೆಯಿಂದ ಸುಮಾರು 15 ಅಡಿ ಎತ್ತರದಲ್ಲಿ ನಿರ್ವಿುಸಲಾಗುವ ಈ ಕಾಲುಸಂಕ ಸ್ಥಳೀಯರ ಹೊರತಾಗಿ ಬೇರೆಯವರಿಗೆ ಬೇಸಿಗೆಯ ದಿನಗಳಲ್ಲಿಯೂ ಓಡಾಡಲು ಭಯ ಬೀಳಿಸುವಂತಿದೆ. ಮಳೆ ಅಬ್ಬರದ ದಿನಗಳಲ್ಲಿ ಹಸೆಹಳ್ಳದ ನೀರು ಈ ಕಾಲು ಸಂಕಕ್ಕೆ ತಾಗುವ ಮಟ್ಟದಲ್ಲಿ ಹರಿಯುತ್ತದೆ. ಹೀಗಾಗಿ, ಮಳೆಗಾಲದ ಬಹುತೇಕ ದಿನಗಳು ಮಕ್ಕಳನ್ನು ಈ ದಾರಿಯಲ್ಲಿ ಕಳಿಸಲು ಭಯಪಡುವ ಪಾಲಕರು ಮಕ್ಕಳಿಗೆ ಅನಿವಾರ್ಯವಾಗಿ ಶಾಲೆಗೆ ತೆರಳದಂತೆ ಸೂಚಿಸುತ್ತಿದ್ದಾರೆ.
ಹಣ ಮಂಜೂರಾದರೂ ಆರಂಭವಾಗದ ಕಾಮಗಾರಿ
ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ ಹೆಗಡೆ ಹಸೆಮನೆ ಹೇಳುವಂತೆ, ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾಧ್ಯಕ್ಷರಾಗಿದ್ದ ವೇಳೆ ಇಲ್ಲಿ ಕಾಲು ಸಂಕ ನಿರ್ವಣಕ್ಕಾಗಿ 10 ಲಕ್ಷ ರೂ. ಮಂಜೂರು ಮಾಡಿದ್ದರು. ಈ ಕಾಮಗಾರಿಗೆ ಟೆಂಡರ್ ಸಹ ಕರೆಯಲಾಗಿತ್ತು. ಆದರೆ, ರಾಜ್ಯ ಸರ್ಕಾರ, ಶಾಸಕರು ಬದಲಾವಣೆಯಾದ ಬಳಿಕ ಈ ಕಾಮಗಾರಿ ಕೈಗೆತ್ತಿಕೊಳ್ಳದೇ ಹಾಗೆಯೇ ಬಿಡಲಾಗಿದೆ. ಈ ಕುರಿತು ನಾವು ಹಾಲಿ ಶಾಸಕ ಭೀಮಣ್ಣ ನಾಯ್ಕ ಅವರಿಗೂ ತಿಳಿಸಿದ್ದು, ಈ ವರ್ಷವಾದರೂ ಫುಟ್ ಬ್ರಿಜ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬಹುದು ಎಂಬ ಆಸೆ ಹೊಂದಿದ್ದೇವೆ ಎನ್ನುತ್ತಾರೆ.
ಮಳೆಗಾಲದ ದಿನಗಳಲ್ಲಿ ಅಂಕೋಲಾ ತಾಲೂಕಿನ ಕಮ್ಮಾಣಿ ಕಡೆಜಛಿ ತೆರಳಲು ಸಾಧ್ಯವಾಗುವುದಿಲ್ಲ. ಮತ್ತಿಘಟ್ಟಕ್ಕೆ ಸಂಪರ್ಕ ಪಡೆಯಬೇಕೆಂದರೆ ಈ ಮಾರ್ಗವೇ ನಮಗೆ ಅನಿವಾರ್ಯ. ಈ ವರ್ಷ ಮಳೆಗಾಲದ ದಿನಗಳಲ್ಲಿ ಅನಾರೋಗ್ಯಪೀಡಿತರನ್ನೂ ಕಂಬಳಿಯಲ್ಲಿ ಕಟ್ಟಿ ಇದೇ ಸೇತುವೆಯಲ್ಲಿ ದಾಟಿಸಿ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. | ಗಣಪತಿ ಸಿದ್ದಿ, ಗ್ರಾಮಸ್ಥ