

ಸಿಂಧನೂರು: ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಗಳನ್ನು ಕೈಗೊಳ್ಳುವುದರಿಂದ ಅವರಲ್ಲಿರುವ ಜ್ಞಾನ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಆರ್‌ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಸೋಮನಗೌಡ ಬಾದರ್ಲಿ ಹೇಳಿದರು.
ಇದನ್ನೂ ಓದಿ: ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಗೆ ಬರಲಿ
ನಗರದ ಆದರ್ಶ ವಿದ್ಯಾಲಯ ಆವರಣದಲ್ಲಿ ಶುಕ್ರವಾರ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅನೇಕ ಅಭಿವೃದ್ಧಿಪರ ಯೋಜನೆಗಳು, ಕಾರ್ಯಕ್ರಮಗಳು ಜಾರಿಯಾಗುತ್ತಿವೆ. ನಾಡಿನ ಜನರು, ವಿದ್ಯಾರ್ಥಿ-ಯುವಕರು ಮತ್ತು ಸಮಾಜದ ಎಲ್ಲ ವಲಯಗಳ ಜನತೆ ಇದರ ಸದ್ಬಳಕೆ ಮಾಡಿಕೊಳ್ಳಿ ಎಂದರು.
ತಾಲೂಕು ಬಿಆರ್‌ಸಿ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಬಸಲಿಂಗಪ್ಪ ಹುಡೇದ್ ಮಾತನಾಡಿ, ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿರುವ ದೇಶ ಸುತ್ತ ಕೋಶ ಓದು ಎನ್ನುವ ಮಾತು ಎಲ್ಲ ಕಾಲಕ್ಕೂ ಸತ್ಯ. ವಿದ್ಯಾರ್ಥಿಗಳು ತರಗತಿ ಕೋಣೆಗಳಲ್ಲಿ ಕಲಿತಿರುವ ಜ್ಞಾನವನ್ನು ಐತಿಹಾಸಿಕ ಸ್ಥಳ, ವಸ್ತು ಸಂಗ್ರಹಾಲಯಗಳು ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿ ನೀಡುವುದರಿಂದ ಅವರು ಕಲಿತಿರುವ ಪಠ್ಯಾಂಶಗಳು ಅವರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ ಎಂದರು.
ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ಶಿಕ್ಷಣ ಸಂಯೋಜಕ ಹನುಮಂತಪ್ಪ ನಾಯ್ಕರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಮಲ್ಲಪ್ಪ, ಮುಖ್ಯಶಿಕ್ಷಕರಾದ ಜಿ.ಸಮತ ಶರ್ಮಾ, ರಮಾದೇವಿ ಶಂಭೋಜಿ, ಚಂದ್ರಮೌಳೇಶ್ವರಸ್ವಾಮಿ, ಸುವರ್ಣ, ರೇಖಾ ತದ್ದೇವಾಡಿ, ದಿನೇಶ ಕೆಪಿ, ಹೊಳಿಯಪ್ಪ, ಭೀಮರೆಡ್ಡಿ, ಪ್ರಮುಖರಾದ ರವೀಂದ್ರಗೌಡ, ರಾಮದಾಸ, ವೀರೇಶ ಗೋನವಾರ, ಚೆನ್ನಬಸವ, ಗಿರೀಶ, ಲಿಂಗೇಗೌಡ, ದೈಹಿಕ ಶಿಕ್ಷಕರಾದ ಶಾಂತಮೂರ್ತಿ, ಅನಿತಾ, ಶಕುಂತಲಾ, ಶರಣಬಸವ ಇದ್ದರು.
ಹಸಿರು ನಿಶಾನೆ : ಹಸಿರು ನಿಶಾನೆ ತೋರಿಸುವುದರೊಂದಿಗೆ ಸ್ವತಃ ಬಸ್‌ಗಳನ್ನು ಚಾಲನೆ ಮಾಡುವ ಮೂಲಕ ಸೋಮನಗೌಡ ಬಾದರ್ಲಿ ಮತ್ತು ಬಾಬುಗೌಡ ಬಾದರ್ಲಿ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿದರು. ಪ್ರಸ್ತುತ ಸಾಲಿನ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸದಲ್ಲಿ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಆಯ್ದ 145ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರು ಬಸ್ಸುಗಳಲ್ಲಿ ತೆರಳಿದರು.