ಮಲಗೋ ಜಾಗಕ್ಕೂ ಹೊಡೆದಾಟ! ಚಪ್ಪಲಿ ಡಿಸೈನ್​ನಿಂದಲೇ ಸಿಕ್ಕಿಬಿದ್ದ ಕೊಲೆಗಾರ

slipper
Published on

ಬೆಂಗಳೂರು: ಚಿಂದಿ ಹಾಯುವವರು ಇಬ್ಬರು ಪಾರ್ಕ್​ನಲ್ಲಿ ತಾವು ಮಲಗುವ ಜಾಗಕ್ಕಾಗೇ ಕಿತ್ತಾಡಿಕೊಂಡು ಕೊಲೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಕೊಲೆಗಾರ ಸಿಕ್ಕಿಬಿದ್ದಿದ್ದಾನೆ. ಕೊಲೆಗಾರನ ಚಪ್ಪಲಿಯ ಡಿಸೈನ್​ನಿಂದಲೇ ಆತ ಸಿಕ್ಕಿಬಿದ್ದಿರುವುದಾಗಿ ಹೇಳಲಾಗಿದೆ.

ಕಲಬುರಗಿ ಮೂಲದ ಅಶೋಕ್ ಮತ್ತು ಮಾಲೂರು ಮೂಲದ ಸತೀಶ್​ ಚಿಂದಿಹಾಯ್ದುಕೊಂಡು ಜೀವನ ಸಾಗಿಸುತ್ತಿದ್ದರು. ಅಶೋಕ್​ ಮೊದಲಿನಿಂದಲೂ ಬಾಬುಸಾಬ್ ಪಾಳ್ಯದ ಪಾರ್ಕ್​ನಲ್ಲಿ ಮಲಗುತ್ತಿದ್ದನಂತೆ. ಲಾಕ್​ಡೌನ್​ ಆರಂಭವಾದ ನಂತರ ಸತೀಶ್​ ಕೂಡ ಅಲ್ಲೇ ಮಲಗಲು ಬಂದಿದ್ದಾನೆ. ಮೇ 15 ರಂದು ಮಲಗುವ ಜಾಗದ ವಿಚಾರದಲ್ಲಿ ಸತೀಶ್ ಮತ್ತು ಅಶೋಕ್ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಸತೀಶ್​ ಅಶೋಕನ ತಲೆಗೆ 12 ಬಾರಿ ಮಚ್ಚಿನಿಂದ ಕೊಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಪ್ರಕರಣ ಹೆಣ್ಣೂರು ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ. ಮೊದಲಿಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಒಂದೂ ಸುಳಿವು ಸಿಕ್ಕಿಲ್ಲ. ಅದಾದ ನಂತರ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲಿ ರಕ್ತವನ್ನು ತುಳಿದುಕೊಂಡು ಹೋಗಿದ್ದ ಚಪ್ಪಲಿಯ ಗುರುತು ಕಂಡಿದೆ. ಅದನ್ನು ರಿಪೋರ್ಟ್​ ಮಾಡಿಟ್ಟುಕೊಂಡ ಪೊಲೀಸರು ಪ್ರತಿದಿನ ಪಾರ್ಕಿಗೆ ಮಲಗಲು ಬರುವವರ ಮೇಲೆ ಕಣ್ಣಿಟ್ಟಿದ್ದಾರೆ. ಸುಮಾರು 50 ಜನರನ್ನು ಗುರುತಿಸಿ ಅವರೆಲ್ಲರ ಚಪ್ಪಲಿ ಡಿಸೈನ್​ ಪರಿಶೀಲಿಸಲಾಗಿದೆ. ನೀರಿನಲ್ಲಿ ಚಪ್ಪಲಿ ಇರಿಸಿ ಅದಾದ ನಂತರ ಅದನ್ನು ಮರಳಿನ ಮೇಲೆ ಇರಿಸಿ ಡಿಸೈನ್​ ನೋಡಲಾಗಿದೆ. ಆಗ ಸತೀಶ್​ ಚಪ್ಪಲಿ ಗುರುತು ಹಾಗೂ ಕೊಲೆಯಾದ ಜಾಗದಲ್ಲಿ ಸಿಕ್ಕಿದ್ದ ಚಪ್ಪಲಿ ಗುರುತು ಒಂದೇ ರೀತಿ ಇದ್ದಿದ್ದು ಬೆಳಕಿಗೆ ಬಂದಿದೆ.

ಸತೀಶ್​ನನ್ನು ವಶಕ್ಕೆ ಪಡೆದ ಪೊಲೀಸರು ಆತನ ಬಾಯಿ ಬಿಡಿಸಿದ್ದಾರೆ. ತಾನೇ ಮಲಗುವ ಜಾಗದ ವಿಚಾರಕ್ಕೆ ಜಗಳವಾಡಿ ಅಶೋಕನ ಕೊಲೆ ಮಾಡಿದ್ದಾಗಿ ಸತೀಶ್ ಒಪ್ಪಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net