ಉಪಟಳ ನೀಡುತ್ತಿದ್ದ ಆನೆಗಳಿಗೆ ಅಂಕುಶ

Rmgm-Ph-01-Ane Karyacarane Sakane Karyapade- Story-Photo - 23-6-2024
Published on

* ಯಶಸ್ವಿ ಕಾರ್ಯಾಚರಣೆಯಲ್ಲಿ ಸ್ವಸ್ಥಾನ ಸೇರಿದ ಗಜಪಡೆ

* ಆಗಸ್ಟ್, ಸೆಪ್ಟೆಂಬರ್ ವೇಳೆಗೆ ತಡೆಬೇಲಿ ಅಳವಡಿಕೆ ಕಾರ್ಯ ಪೂರ್ಣ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಜಿಲ್ಲೆಯ ತೆಂಗಿನಕಲ್ಲು, ಕಬ್ಬಾಳು ಅರಣ್ಯಪ್ರದೇಶದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳಿಗೆ ಅಂಕುಶ ಹಾಕಿರುವ ಅರಣ್ಯ ಇಲಾಖೆ 20ಕ್ಕೂ ಹೆಚ್ಚು ಆನೆಗಳನ್ನು ಕಾರ್ಯಾಚರಣೆ ಮೂಲಕ ಸ್ವ-ಸ್ಥಾನ ಸೇರಿಸುವಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆ. ಸಾಕಾನೆಗಳು ಅರಣ್ಯ ಕಾರ್ಯಪಡೆ, ಸಿಬ್ಬಂದಿ ಮೂಲಕ ನಡೆಯುತ್ತಿರುವ ಬೃಹತ್ ಕಾರ್ಯಾಚರಣೆ ಅರಣ್ಯ ಇಲಾಖೆ ಮತ್ತು ರೈತರಿಗೆ ಕೊಂಚ ನೆಮ್ಮದಿ ತಂದಂತಿದೆ. ಜಿಲ್ಲೆಯ ತೆಂಗಿನಕಲ್ಲು, ಕಬ್ಬಾಳು ಮುಂತಾದ ಅರಣ್ಯಪ್ರದೇಶದಲ್ಲಿ 29ಕ್ಕೂ ಹೆಚ್ಚು ಆನೆಗಳು ಕಳೆದ ಮೂರು ತಿಂಗಳಿಂದಲೂ ನಿರಂತರವಾಗಿ ಅರಣ್ಯದಂಚಿನ ಗ್ರಾಮಗಳ ರೈತರ ಜಮೀನಿನ ಮೇಲೆ ದಾಳಿ ನಡೆಸಿ ಫಸಲು, ರೈತರ ಬೋರ್‌ವೆಲ್ ಪರಿಕರ ನಾಶಮಾಡಿ ರೈತರಲ್ಲಿ ಭಯ ಹುಟ್ಟಿಸಿದ್ದವು.

ಆನೆಗಳ ನಿಯಂತ್ರಣಕ್ಕೆ ಹೊಸ ಉಪಾಯ ಕಂಡುಕೊಂಡ ಅರಣ್ಯ ಇಲಾಖೆ ದುಬಾರೆ, ಮತ್ತಿಕೋಡು ಶಿಬಿರದ ಏಳು ಸಾಕಾನೆಗಳನ್ನು ತರಿಸಿ ಹೊಸ ವಿಧಾನದಲ್ಲಿ ಡ್ರೋಣ್ ಕ್ಯಾಮರಾ ಬಳಸಿ ಕಾರ್ಯಾಚರಣೆ ನಡೆಸಿತ್ತು. ಸತತ 12 ದಿನ ಸುಮಾರು 12 ಆನೆಗಳನ್ನು ಸಾಕಾನೆಗಳ ಮೂಲಕ ನಾಲ್ಕು ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿ ಸ್ವಸ್ಥಾನದತ್ತ ಕಾಡಾನೆಗಳನ್ನು ಕಾಡಿಗಟ್ಟಿತು. ಅದರ ಬೆನ್ನಲ್ಲೇ ಅರಣ್ಯ ಕಾರ್ಯಪಡೆ ಮತ್ತು ಸಿಬ್ಬಂದಿ ಒಟ್ಟಿಗೆ ಕಾರ್ಯಾಚರಣೆ ನಡೆಸಿ 8 ಆನೆ ಸೇರಿ ಒಟ್ಟು 20 ಆನೆಗಳನ್ನು ಸ್ವಸ್ಥಾನ ಸೇರಿಸಿ ನಿಟ್ಟುಸಿರು ಬಿಟ್ಟಿದ್ದಾರೆ.

ಶುಭ ಸುದ್ಧಿ 

ಕಾರ್ಯಾಚರಣೆಯಲ್ಲಿ ಕಾವೇರಿ ವನ್ಯಜೀವಿಧಾಮ ಸೇರಿರುವ 20 ಆನೆಗಳು ಎರಡು ವಾರ ಕಳೆದರೂ ಜಿಲ್ಲೆಯ ಅರಣ್ಯ ಪ್ರದೇಶದತ್ತ ಮುಖ ಮಾಡಿಲ್ಲ. ಇದಕ್ಕೆ ಕಾವೇರಿ ವನ್ಯಜೀವಿಧಾಮದಲ್ಲಿ ಬೆಂಗಳೂರು ಮತ್ತು ಚಾಮರಾಜನಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೈಗೊಂಡ ಬಿಗಿಕ್ರಮ ಮತ್ತು ಸಿಬ್ಬಂದಿಯ ನಿರಂತರ ಕಾವಲು ಕಾರಣ ಎನ್ನಲಾಗಿದೆ.

ನಿಯಂತ್ರಣ 

ಕಾವೇರಿ ವನ್ಯಜೀವಿಧಾಮದಲ್ಲಿ ರೈಲ್ವೆ ಬ್ಯಾರಿಕೇಡ್ ತಡೆಬೇಲಿ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಬ್ಯಾರಿಕೇಡ್ ಅಳವಡಿಕೆ ಕಾರ್ಯ ಮುಗಿಯಲಿದೆ ಎನ್ನಲಾಗಿದೆ. ಇದರಿಂದ ಕಾವೇರಿ ವನ್ಯಜೀವಿಧಾಮದ ಆನೆಗಳು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಬರುವುದು ಮುಂದೆ ತಪ್ಪಲಿದೆ ಎನ್ನುತ್ತಾರೆ ಅರಣ್ಯ ಸಿಬ್ಬಂದಿ.

ವಾಪಸ್ ಹೋದ ಸಾಕಾನೆಗಳು

ಆನೆಗಳ ಕಾರ್ಯಾಚರಣೆಗೆ ಬಂದಿದ್ದ ದುಬಾರೆ, ಮತ್ತಿಕೋಡು ಶಿಬಿರದ ಶ್ರೀಕಾಂತ, ಅಜೇಯ, ಶ್ರೀರಾಮ, ಲಕ್ಷ್ಮಣ, ಕಂಜನ್, ವಿಕ್ರಂ, ಈಶ್ವರ್ ಎಂಬ ಏಳು ಆನೆಗಳು 12 ದಿನಗಳ ಯಶಸ್ವೀ ಕಾರ್ಯಾಚರಣೆ ನಡೆಸಿ ವಾಪಸ್ ಶಿಬಿರ ಸೇರಿವೆ.

ಸಿಬ್ಬಂದಿ ಕಾರ್ಯಾಚರಣೆ

ಹಂದಿಗೊಂದಿ 3, ತೆಂಗಿನಕಲ್ಲು 1, ಕಬ್ಬಾಳು 2, ನರೀಕಲ್ಲುಗುಡ್ಡ 1, ಕಬ್ಬಾಳು 2 ಒಟ್ಟು 9 ಆನೆಗಳಿದ್ದು, ಅವುಗಳು ಬೇರೆ ಬೇರೆ ಪ್ರದೇಶದಲ್ಲಿ ಒಂಟಿಯಾಗಿರುವ ಕಾರಣ ಸಾಕಾನೆಗಳ ಕಾರ್ಯಾಚರಣೆಗೆ ಒಟ್ಟಿಗೆ ಸಿಗದ ಪರಿಣಾಮ ವಿವಿಧ ಅರಣ್ಯದಲ್ಲಿ ಚದುರಿರುವ ಉಳಿದ ಆನೆಗಳನ್ನು ಗುಂಪು ಮಾಡಿ ತೆಂಗಿನಕಲ್ಲು ಅರಣ್ಯಕ್ಕೆ ತಂದು ಅಲ್ಲಿಂದ ನೇರವಾಗಿ ಸ್ವ-ಸ್ಥಾನಕ್ಕೆ ಅಟ್ಟುವ ಪ್ರಯತ್ನ ಸಾಗಿದೆ. ಒಂದೆರಡು ದಿನಗಳಲ್ಲಿ ಸ್ವಸ್ಥಾನಕ್ಕಟ್ಟುವ ವಿಶ್ವಾಸ ಅರಣ್ಯ ಇಲಾಖೆಯದ್ದಾಗಿದೆ.

ವೆಚ್ಚ ಜಾಸ್ತಿ

ಒಂಟಿ ಆನೆಗಳು ವಿಂಗಡಣೆಯಾಗಿ ಬಹು ದೂರ ಅರಣ್ಯ ಪ್ರದೇಶದಲ್ಲಿ ಇರುವ ಕಾರಣ ಸಾಕಾನೆಗಳ ಆಹಾರ, ವಾಹನ, ಮಾವುತರು, ಸಾಗಣೆ ಖರ್ಚು ಅಧಿಕವಾಗುವ ಕಾರಣ ಸಾಕಾನೆಗಳ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಬ್ರೇಕ್ ನೀಡಿ ಅವುಗಳನ್ನು ಬಿಡಾರದತ್ತ ಕಳುಹಿಸಿದೆ. ಮುಂದಿನ ಕಾರ್ಯಾಚರಣೆ ಅರಣ್ಯ ಸಿಬ್ಬಂದಿ ಹಾಗೂ ಕಾರ್ಯಪಡೆಯಿಂದ ನಡೆಸಲು ಇಲಾಖೆ ಯೋಚಿಸಿದೆ.

ನಾಲ್ಕೈದು ಆನೆಗಳು ಖಾಯಂ

ತೆಂಗಿನಕಲ್ಲು ಭಾಗದಲ್ಲಿರುವ ಒಂಟಿ, ಎರಡು ಜೋಡಿ ಆನೆಗಳು ಕಾರ್ಯಾಚರಣೆಯಲ್ಲಿ ಹೋದರೂ ಅವು ತೆಂಗಿನಕಲ್ಲು ಅರಣ್ಯ ಬಿಟ್ಟಿರಲಾರವು ಎನುತ್ತದೆ ಅರಣ್ಯ ಇಲಾಖೆ. ಏಕೆಂದರೆ ಅವು ಇಲ್ಲಿನ ಅರಣ್ಯಕ್ಕೆ ಹೊಂದಿಕೊಂಡಿವೆ. ಜತೆಗೆ ಅವು ಅರಣ್ಯ ಬಿಟ್ಟು ಕದಲುವುದಿಲ್ಲ, ಬೇರೆ ಆನೆಗಳ ರೀತಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುವುದಿಲ್ಲ. ಅವುಗಳ ಉಪಟಳ ಕಡಿಮೆ, ನಮ್ಮ ಕಾರ್ಯಾಚರಣೆಯಲ್ಲಿ ಹೋದರೂ ಮತ್ತೆ ವಾಪಸ್ ಬರುತ್ತವೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ಹೊಸ ಪ್ರಯತ್ನವಾಗಿ ಸಾಕಾನೆಗಳ ಮೂಲಕ ಮತ್ತು ಅರಣ್ಯ ಸಿಬ್ಬಂದಿ, ಕಾರ್ಯಪಡೆ ಮೂಲಕ ಕಾರ್ಯಾಚರಣೆ ನಡೆಸಿದ ಪರಿಣಾಮ 20ಕ್ಕೂ ಹೆಚ್ಚು ಆನೆಗಳು ಸ್ವ-ಸ್ಥಾನ ಸೇರಿವೆ. ಆ ಆನೆಗಳು ಮತ್ತೆ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ವಾಪಸಾಗಿಲ್ಲ. ಇದು ಖುಷಿಯ ಸಂಗತಿ. ಕಾರ್ಯಾಚರಣೆಯಲ್ಲಿ ಹಗಲಿರುಳೆನ್ನದೆ ದುಡಿದ ಎಲ್ಲ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ, ಸಾಕಾನೆಗಳ ಮಾವುತರಿಗೆ, ಕಾರ್ಯಾಚರಣೆಯಲ್ಲಿ ಸಹಕರಿಸಿದ ಸಾರ್ವಜನಿಕರಿಗೆ ಧನ್ಯವಾದಗಳು.

ಎಂ. ರಾಮಕೃಷ್ಣಪ್ಪ, ಡಿಎಫ್‌ಒ, ಅರಣ್ಯ ಇಲಾಖೆ, ರಾಮನಗರ

ಕಾವೇರಿ ವನ್ಯಜೀವಿಧಾಮಕ್ಕೆ ಹೋದ ಆನೆಗಳನ್ನು ಮತ್ತೆ ವಾಪಸ್ ಬರದಂತೆ ತಡೆದು ಬಿಗಿ ಕ್ರಮ ಕೈಗೊಂಡರೆ ಮಾತ್ರ ಈ ಭಾಗದಲ್ಲಿ ಆನೆಗಳ ಉಪಟಳ ತಪ್ಪಬಹುದು. ಜನರಿಂದ ವಿರೋಧ ಬಂದಾಗ ಕಾವೇರಿ ವನ್ಯಜೀವಿಧಾಮದಲ್ಲಿ ತಡೆದಂತೆ ತಡೆದು ಮತ್ತೆ ಯಥಾಸ್ಥಿತಿ ಆನೆಗಳನ್ನು ಜಿಲ್ಲೆಯ ಅರಣ್ಯ ಪ್ರದೇಶದತ್ತ ಬಿಟ್ಟರೆ ಇಲಾಖೆಯ ಶ್ರಮ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ.

ಚಂದ್ರಗಿರಿ, ಬನ್ನಿಕುಪ್ಪೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net