

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದೊಳಗೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸದೆ ಬೈಪಾಸ್‌ನಲ್ಲೆ ಪ್ರಯಾಣಿಕರನ್ನು ಇಳಿಸಿ ತೆರಳಿದ್ದ ಸಾರಿಗೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಬುಧವಾರ ಸಂಜೆ ಅಸಮಾಧಾನ ಹೊರ ಹಾಕಿದರು.
ಬೈಪಾಸ್‌ನಲ್ಲಿ ಹೋಗಬೇಡಿ, ಸತ್ತೇಗಾಲ ಗ್ರಾಮದ ಒಳಗಡೆ ಹೋಗುವಂತೆ ಪ್ರಯಾಣಿಕರು ಹೇಳಿದರೂ ಚಾಲಕ ಸತ್ತೇಗಾಲ ಗ್ರಾಮದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಾಲ್ವರು ಮಹಿಳೆಯರು ಒಬ್ಬ ಯುವಕನನ್ನು ಇಳಿಸಿ ಕೊಳ್ಳೇಗಾಲ ಕಡೆಗೆ ತೆರಳಿದ್ದಾರೆ. ತಾಲೂಕಿನ ಸತ್ತೇಗಾಲ ಗ್ರಾಮದ ಹೊರ ವಲಯದಿಂದ ರಾಷ್ಟ್ರೀಯ ಹೆದ್ದಾರಿ 948ಯಿಂದ ರಸ್ತೆ ಸಾರಿಗೆ ಬಸ್‌ಗಳು ಸತ್ತೇಗಾಲದ ಗ್ರಾಮದ ಒಳಗೆ ಮತ್ತು ಹ್ಯಾಂಡ್‌ಪೋಸ್ಟ್ ಗ್ರಾಮದ ಒಳಗೆ ತೆರಳದೆ ಬೈಪಾಸ್‌ನಲ್ಲಿ ತೆರಳುತ್ತಿರುವುದರಿಂದ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗ್ರಾಮದ ಒಳಗೆ ಬಸ್ ಸಂಚರಿಸುವಂತೆ ಕೆಎಸ್‌ಆರ್‌ಟಿ ಡಿಸಿಗೆ ಸೂಚನೆ ನೀಡಿದ್ದರು.
ಸ್ವಲ್ಪ ದಿನ ಬಸ್‌ಗಳು ಗ್ರಾಮದ ಒಳಗೆ ಸಂಚಾರ ಮಾಡುತ್ತಿತ್ತು. ಬುಧವಾರ ಸಂಜೆ 5.49 ರಲ್ಲಿ ಮಳವಳ್ಳಿಯಿಂದ ಕೊಳ್ಳೇಗಾಲದ ಕಡೆಗೆ ಹೋಗುತ್ತಿದ್ದ ಬಸ್ ಸತ್ತೇಗಾಲ ಗ್ರಾಮದೊಳಗೆ ತೆರಳದೆ ಬೈಪಾಸ್‌ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಗ್ರಾಮಸ್ಥರ ಮನವಿಯನ್ನೂ ತಿರಸ್ಕರಿಸಿ ಸತ್ತೇಗಾಲ ಹೊರ ವಲಯದ ಬೈಪಾಸ್‌ನಲ್ಲೇ ಒಬ್ಬ ಯುವಕ, ನಾಲ್ವರು ಮಹಿಳೆಯರನ್ನು ಇಳಿಸಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ಧಾರೆ.