ಚಹಾ, ಇಡ್ಲಿ ಮಾರಿದ ಸಾರಿಗೆ ನೌಕರರು

2-RNR-03
Published on

ರಾಣೆಬೆನ್ನೂರ: 6ನೇ ವೇತನ ಆಯೋಗ ಜಾರಿ ಮಾಡುವುದು ಸೇರಿ 9 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ತಾಲೂಕು ಘಟಕದ ವತಿಯಿಂದ ಶುಕ್ರವಾರ ನಗರದ ಬಸ್ ನಿಲ್ದಾಣದ ಎದುರು ಚಹಾ, ಬಜ್ಜಿ, ಇಡ್ಲಿ, ಉಪ್ಪಿಟ್ಟು ಮಾರಾಟ ಮಾಡುವ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡ ಸಾರಿಗೆ ಸಂಸ್ಥೆ ನೌಕರರು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಬಸ್ ನಿಲ್ದಾಣದ ಎದುರು ಗೂಡಂಗಡಿ ಹಾಕಿಕೊಂಡು ಅಲ್ಲಿಯೇ ಚಹಾ, ಬಜ್ಜಿ, ಮಿರ್ಚಿ, ಇಡ್ಲಿ ಹಾಗೂ ಉಪ್ಪಿಟ್ಟು ಮಾಡಿದರು. ನಂತರ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿಕೊಂಡಿದ್ದ ಮಹಾಂತೇಶ ಬೆಣ್ಣಿಹಳ್ಳಿ ಮಾತನಾಡಿ, 6ನೇ ವೇತನ ಆಯೋಗ ಜಾರಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿದ್ದೇವೆ. ಆದರೆ, ಈವರೆಗೂ ಬೇಡಿಕೆ ಈಡೇರಿಸಿಲ್ಲ. ಅಲ್ಲದೆ, ಕರೊನಾ ಸಮಯದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಮುಷ್ಕರ ಆರಂಭಿಸಿದಾಗ, ಡಿಸಿಎಂ ನೇತೃತ್ವ ಸಭೆ ನಡೆಸಿ 9 ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಆದರೆ, ಈವರೆಗೂ ಯಾವ ಬೇಡಿಕೆಯೂ ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು.

ಆದ್ದರಿಂದ ಸರ್ಕಾರ ಹೇಳಿರುವಂತೆ 9 ಬೇಡಿಕೆ ಜಾರಿಗೆ ಬರಬೇಕು. ಅಲ್ಲಿಯವರೆಗೂ ದಿನಕ್ಕೊಂದು ವಿಭಿನ್ನ ರೀತಿಯ ಹೋರಾಟ ಮಾಡಲಾಗುವುದು. ನಂತರ ರಾಜ್ಯಾದ್ಯಂತ ಮುಷ್ಕರ ಆರಂಭಿಸಿ, ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸಾರಿಗೆ ಸಂಸ್ಥೆ ನೌಕರರಾದ ಪ್ರಭು ಲಮಾಣಿ, ಎಚ್. ತಿಮ್ಮರೆಡ್ಡಿ, ಆನಂದಕುಮಾರ ಸೊಂಡೇರ, ಮಂಜುನಾಥ ಬಿ.ಎಚ್., ಜಿ.ಎಸ್. ಸಣ್ಣಮನಿ, ಅಂಬರೀಷ ಎನ್., ಕೆ. ವೆಂಕಟೇಶ, ಯಲ್ಲಪ್ಪ ಪೂಜಾರಿ, ಎಂ. ಓಂಕಾರಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಬಸ್ ಸಂಚಾರಕ್ಕೆ ತೊಂದರೆಯಿರಲಿಲ್ಲ

ಬಸ್ ಚಾಲಕರು ಹಾಗೂ ನಿರ್ವಾಹಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಬಸ್ ಸಂಚಾರಕ್ಕೆ ಯಾವುದೇ ಅಡಚಣೆ ಉಂಟು ಮಾಡಲಿಲ್ಲ. ಬದಲಾಗಿ ಕರ್ತವ್ಯಕ್ಕೆ ನಿಯೋಜನೆಯಾದವರು ಸಮಯಕ್ಕೆ ಸರಿಯಾಗಿ ಬಸ್ ಓಡಿಸಿದರು. ಬಾಕಿಯಿರುವ ನೌಕರರು ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net