

ಗುಂಡ್ಲುಪೇಟೆ: ತಾಲೂಕಿನ ಶಿಂಡನಪುರ ಗ್ರಾಮದಲ್ಲಿ ಸಾರಿಗೆ ಬಸ್‌ಗಳನ್ನು ನಿಲ್ಲಿಸದಿರುವುದನ್ನು ಖಂಡಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಸೋಮವಾರ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮದ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪಟ್ಟಣಕ್ಕೆ ತೆರಳಲು ಸಾರಿಗೆ ಬಸ್ ಅವಲಂಬಿಸಿದ್ದು, ಬಸ್ ನಿಲ್ಲಿಸದಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್‌ಗಳನ್ನು ಕೆಲಕಾಲ ತಡೆದು ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಪಟ್ಟಣ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಪ್ರತಿಭಟನಾನಿರತರ ಮನವೊಲಿಸಿ ಬಸ್ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಸಾರಿಗೆ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಬಸ್ ನಿಲ್ಲಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.