

ಹೊಸಪೇಟೆ: ಉಡುಪಿ ಕಾಲೇಜೊಂದರ ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ವಿದ್ಯಾರ್ಥಿನಿಯ ವಿಡಿಯೋ ತೆಗೆದ ಪ್ರಕರಣಕ್ಕೆ ಸಂಬಂಧಿಸಿ ಪಾರದರ್ಶಕ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಶೌಚಾಲಯದಲ್ಲಿ ವಿಡಿಯೋ ಪ್ರಕರಣ ಎನ್ಐಎ ತನಿಖೆಗೆ ಆಗ್ರಹ
ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ತಹಸಿಲ್ ಕಚೇರಿಗೆ ಪಾದಯಾತ್ರೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಉಡುಪಿಯಲ್ಲಿ ಮೂವರು ವಿದ್ಯಾರ್ಥಿನಿಯರು ವಿಡಿಯೋ ಮಾಡಿ ಗ್ರೂಪ್‌ಗೆ ಹಾಕಿದ್ದಾರೆ. ಆದರೆ ಸರ್ಕಾರ ವಿಡಿಯೋ ಮಾಡಿಲ್ಲ ಎಂದು ಹೇಳುತ್ತದೆ. ವಿದ್ಯಾರ್ಥಿನಿಯರು ನಾವು ತಮಾಷೆಗೆ ಮಾಡಿದ್ದೇವೆ ಎಂದಿದ್ದಾರೆ.
ಹಾಗಾದರೆ, ಯಾವುದ ಸತ್ಯ ಎಂದು ಪ್ರಶ್ನಿಸಿದರು.ಘಟನೆ ಬೆಳಕಿಗೆ ತಂದ ಯುವತಿಯ ಮನೆಗೆ ಪೊಲೀಸರು ಹೋಗಿ ಅವರ ಪಾಲಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಕ್ಯಾಮರಾ ಇಟ್ಟವರ ವಿರುದ್ಧ ಯಾವುದೇ ಕ್ರಮಜರುಗಿಸಿಲ್ಲ. ಈ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂದು ಕಿಡಿಕಾರಿದರು. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.