

ಆಯಿಲ್, ಅಲ್ಯೂಮಿನಿಯಂ ದೋಚುತ್ತಿರುವ ಖದೀಮರು ಕೃಷಿ ಚಟುವಟಿಕೆಗೆ ಹೊಡೆತ
* ಚೇತನ್ ಚಕ್ಕೆರೆ ಬಿಡದಿ
ಖದೀಮರು ಚಿನ್ನ, ಬೆಳ್ಳಿ, ಹಣ ಮತ್ತು ವಾಹನ ದೋಚುವುದು ಸಾಮಾನ್ಯ. ಆದರೆ, ಇಲ್ಲೊಂದು ಕಳ್ಳರ ತಂಡ ಯಾವುದೇ ವಸ್ತುವನ್ನಾದರೂ ಕದಿಯಲೇಬೆಕೆಂಬ ಹಠಕ್ಕೆ ಬಿದ್ದಂತೆ ಕೊಳವೆಬಾವಿಗಳಿಗೆಂದು ಅಳವಡಿಸಿರುವ ಟ್ರಾನ್‌ಸ್ಾರ್ಮರ್‌ಗಳಿಗೂ ಕನ್ನ ಹಾಕುತ್ತಿದ್ದು, ಈ ಪ್ರಕರಣ ಪೊಲೀಸರಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.
ಬೊರ್‌ವೆಲ್ ಹೊಂದಿರುವ ಪ್ರತಿಯೊಬ್ಬ ರೈತರ ಜಮೀನಿನಲ್ಲೂ ಟ್ರಾನ್ಸ್ ಫಾರ್ಮರ್ ಅಳವಡಿಕೆ ಮಾಡಲಾಗಿದೆ. ಈಗ ಕಳ್ಳರು ಇವುಗಳ ಮೇಲೂ ಕಣ್ಣು ಹಾಕಿದ್ದು, ಟ್ರಾನ್ಸ್ ಫಾರ್ಮರ್ಗಳ ಬಿಡಿ ಭಾಗಗಳನ್ನು ರಾತ್ರೋರಾತ್ರಿ ಕಳವು ಮಾಡಲಾಗುತ್ತಿದೆ.
ಬೆಸ್ಕಾಂನಿಂದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ವೊಲ್ಟೇಜ್‌ನಿಂದ ವ್ಯತ್ಯಯ ಉಂಟಾಗಬಾರದೆಂದು 25 ಕೆವಿ ಸಾಮರ್ಥ್ಯದ ಟಿಸಿ ಅಳವಡಿಕೆ ಮಾಡಲಾಗಿದೆ. ಪ್ರತಿ ಟ್ರಾನ್ಸ್ ಫಾರ್ಮರ್ ಕ್ವಿಂಟಾಲ್‌ಗಟ್ಟಲೇ ತೂಕವಿದ್ದರೂ ಕೆಲವೆಡೆ ಅವುಗಳನ್ನು ಕೆಳಗಿಸಿ ಸಾಮಗ್ರಿ ಕಳವು ಮಾಡುತ್ತಿರುವುದು ಎಲ್ಲರನ್ನು ಹೌಹಾರುವಂತೆ ಮಾಡಿದೆ.
ಟ್ರಾನ್ಸ್ ಫಾರ್ಮರ್‌ಗಳಲ್ಲಿ ಸಿಗುವ 8 ರಿಂದ 10 ಕೆಜಿ ಅಲ್ಯೂಮಿನಿಯಂ ಕೋರ್ ಹಾಗೂ ಸುಮಾರು 100 ಲೀಟರ್ ಆಯಿಲ್ ಇದ್ದು, ಅಲ್ಯೂಮಿನಿಯಂಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಇತ್ತೀಚೆಗೆ ಕಳ್ಳರ ಕಣ್ಣು ವಿದ್ಯುತ್ ಪರಿವರ್ತಕಗಳ ಮೇಲೆ ಬಿದ್ದಿದೆ.
ಟ್ರಾನ್ಸ್ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ಕಡಿತ ಮಾಡಿ ಆಯಿಲ್ ಹಾಗೂ ಅಲ್ಯೂಮಿನಿಯಂ ಕೋರ್ ಕಳವು ಮಾಡುತ್ತಿದ್ದು, ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ರೈತರ ಬೋರ್‌ವೆಲ್ಗಳು ರನ್ ಆಗುವುದಿಲ್ಲ. ಇತ್ತ ರೈತರು ಸಾಲ ಸೋಲ ಮಾಡಿ ಬೋರ್‌ವೆಲ್ನಲ್ಲಿ ನೀರಿದೆ ಎಂದು ಭತ್ತ, ಜೋಳ, ತರಕಾರಿ ಸೇರಿ ಇನ್ನಿತರ ಬೆಳೆ ಬೆಳೆದಿದ್ದಾರೆ. ಆದರೆ ಟಿಸಿ ಕೆಲಸ ಮಾಡದ ಕಾರಣ ಬೆಳೆಗಳು ನೀರಿಲ್ಲದೆ ಒಣಗುವಂತಾಗಿದೆ.
ಬಿಡದಿ ಹೋಬಳಿಯ ಹಲವು ಗ್ರಾಮಗಳಲ್ಲಿ ಟ್ರಾನ್ಸ್ಫಾರ್ಮರ್ ಕಳವು ಮಾಡಿದ್ದಾರೆ. ಮೇ 31 ರಂದು ಅಂಚೀಪುರ ಗ್ರಾಮ ಒಂದರಲ್ಲೇ ಮೂವರು ರೈತರ ಜಮೀನಿನಲ್ಲಿದ್ದ ಮೂರು ಟ್ರಾನ್ಸ್ಫಾರ್ಮರ್‌ಗೆ ಕನ್ನ ಹಾಕಲಾಗಿದೆ. ಜೋಗನಪಾಳ್ಯ, ಹೊಸೂರು, ನಂಜೇಗೌಡನದೊಡ್ಡಿ, ಕಂಚುಗಾರನಹಳ್ಳಿ ಗ್ರಾಮಗಳು ಸೇರಿ ಇನ್ನೂ ಹಲವು ಗ್ರಾಮಗಳಲ್ಲಿ ಟಿಸಿಗಳಲ್ಲಿನ ವಸ್ತುಗಳನ್ನು ಕಳವು ಮಾಡಿದ್ದಾರೆ.
ಟಿಸಿಗಳಲ್ಲಿನ ಆಯಿಲ್ ಹಾಗೂ ಅಲ್ಯೂಮಿನಿಯಂ ವಸ್ತುಗಳು ಕಳುವಾಗುತ್ತಿರುವುದನ್ನು ತಡೆಯಲು ಬೆಸ್ಕಾಂ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ಠಾಣೆಗೆ ದೂರು ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಇತ್ತ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೆಲವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಕೇಳಿ ಬಂದಿದೆ.
ಬಿಡದಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೈತರ ಜಮೀನು ಹಾಗೂ ಸೈಟ್‌ಗಳಲ್ಲಿನ 25 ಕೆವಿ ಟ್ರಾನ್ಸ್‌ಫಾರ್ಮರ್‌ಗಳನ್ನು ಬಿಚ್ಚಿ ಅಲ್ಯೂಮಿನಿಯಂ ಕೋರ್ ಹಾಗೂ ಆಯಿಲ್ ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ತನಿಖೆ ನಡೆಸಿ ಕೆಲವರನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಬಂದಿದೆ.ಪುಟ್ಟಸ್ವಾಮಿಎಇಇ, ಬೆಸ್ಕಾಂ ಇಲಾಖೆ ಬಿಡದಿ