ಶ್ವೇತಾ ಗೌಡ ವಂಚನೆ ಕೇಸ್ ಸಿಸಿಬಿಗೆ ವರ್ಗಾಯಿಸಿ : ರಾಜ್ಯ ಹರಳು ಮತ್ತು ಆಭರಣ ದೇಶೀಯ ಪರಿಷತ್ ಮನವಿ

gold scam
Published on

ಬೆಂಗಳೂರು:ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರು ಹೇಳಿಕೊಂಡು ಚಿನ್ನಾಭರಣ ಮಳಿಗೆ ಮಾಲೀಕರಿಗೆ ಶ್ವೇತಾ ಗೌಡ ವಂಚಿಸಿದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಬೇಕು ಎಂದು ಕೋರಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ, ರಾಜ್ಯ ಹರಳು ಮತ್ತು ಆಭರಣ ದೇಶೀಯ ಪರಿಷತ್ ದೂರು ಕೊಟ್ಟಿದೆ.

ಈ ಕೇಸಿನಲ್ಲಿ ಸತ್ಯಾಂಶವಿದ್ದರೂ ಸ್ಥಳೀಯ ಪೊಲೀಸರು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಆರೋಪಿ ಶ್ವೇತಾ ಗೌಡ ಹೊರರಾಜ್ಯದ ಚಿನ್ನದ ಮಾಲೀಕರಿಗೂ ವಂಚಿಸಿರುವ ಸಾಧ್ಯತೆಗಳಿವೆ. ರಾಜಸ್ಥಾನದ ಜೈಪುರದಲ್ಲಿ ಆಭರಣ ವ್ಯಾಪಾರಿ ಸೋಗಿನಲ್ಲಿ ತೆರಳಿದ್ದ ಶ್ವೇತಾ ಗೌಡ, ಅಲ್ಲಿನ ಹಲವು ಮಳಿಗೆಗಳ ಮಾಲೀಕರಿಗೂ ವಂಚಿಸಿರುವ ಬಗ್ಗೆ ದೂರುಗಳಿವೆ. ಹಾಗಾಗಿ. ಗಂಭೀರತೆ ಆಧಾರಿಸಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಿ, ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪರಿಷತ್ ಅಧ್ಯಕ್ಷ ಡಾ.ಬಿ. ರಾಮಾಚಾರಿ ನೇತೃತ್ವದ ನಿಯೋಗ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದೆ.

ನಮ್ಮ ಸಂಸ್ಥೆಯ ಸದಸ್ಯ ಆರ್. ಬಾಲರಾಜ್ ಶೇಠ್, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಭಾಷ್‌ನಗರದಲ್ಲಿ ಪ್ರಗತಿ ಜುವೆಲ್ಲರಿ ಮಳಿಗೆ ಮಾಲೀಕರು. ಇವರು ಸಹ ಶ್ವೇತಾ ಗೌಡ ಅವರಿಂದ ವಂಚನೆಗೆ ಒಳಗಾಗಿದ್ದರು. ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನಂತರ, ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಪ್ರಕರಣ ಸಂಬಂಧ ಆರೋಪಿತೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾಳೆ. ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ಬಾಲರಾಜ್ ಶೇಠ್‌ಗೆ ಸೇರಿದ್ದ ಕೆಲ ಆಭರಣಗಳು ಶ್ವೇತಾ ಗೌಡ ಅವರ ಮನೆಯಲ್ಲಿ ಜಪ್ತಿ ಮಾಡಲಾಗಿತ್ತು. ಇನ್ನಷ್ಟು ಬೆಲೆ ಬಾಳುವ ಆಭರಣಗಳನ್ನು ಆಕೆಯಿಂದ ವಶಪಡಿಸಿಕೊಳ್ಳಬೇಕಿದೆ. ಆಕೆಯಿಂದ ಅಂತಾರಾಜ್ಯ ಆಭರಣ ವ್ಯಾಪಾರಿಗಳು, ತಯಾರಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬಿದ್ದಿದ್ದಾರೆ. ಹಾಗಾಗಿ, ಹೆಚ್ಚಿನ ತನಿಖೆ ನಡೆಸುವ ಅಗತ್ಯ ಇದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net