ಅಬಕಾರಿ ಇಲಾಖೆಯಲ್ಲೂ ವರ್ಗಾವಣೆ ದಂಧೆ

R B Thimmapura
Published on

ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ದಂಧೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲಿ ಅರ್ಧಕ್ಕರ್ಧ ಅಧಿಕಾರಿಗಳು, ತಮ್ಮ ವರ್ಗಾವಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಬಳಿಕ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಆದೇಶ ಹೊರಡಿಸಿದ್ದರು.ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ಬಲ ಶೇ.6 ಮೀರದಂತೆ ಗ್ರೂಪ್ ‘ಎ’, ‘ಬಿ’, ‘ಸಿ’, ಹಾಗೂ ‘ಡಿ’ ವರ್ಗದ ಅಧಿಕಾರಿ, ನೌಕರರನ್ನು ವರ್ಗಾವಣೆಗೆ ಆಯಾ ಇಲಾಖೆಗಳ ಸಚಿವರಿಗೆ ಅಧಿಕಾರ ನೀಡಲಾಗಿತ್ತು. ಅದರಂತೆ, ಅಬಕಾರಿ ಇಲಾಖೆಯಲ್ಲಿ ಅಬಕಾರಿ ಉಪ ಆಯುಕ್ತರು, ಡೆಪ್ಯೂಟಿ ಸೂಪರಿಡೆಂಟ್, ಅಬಕಾರಿ ಅಧೀಕ್ಷಕರು, ನಿರೀಕ್ಷಕರು ಸೇರಿ ಇತರ ವೃಂದದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡಲಾಯಿತು. ಸರ್ಕಾರದ ನಿಯಮದಂತೆ ಒಬ್ಬ ಅಧಿಕಾರಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರೆ 2 ವರ್ಷದವರೆಗೆ ಕಾರ್ಯನಿರ್ವಹಿಸಬಹುದು. ಹೀಗಿದ್ದಾಗ, ಎರಡು ವರ್ಷ ಪೂರೈಸುವ ಮುನ್ನವೇ ಇಲಾಖೆಯಲ್ಲಿ ಹಲವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಆ ಹುದ್ದೆಗಳಿಗೆ ಇನ್ನೊಬ್ಬರನ್ನು ತಂದು ಕೂರಿಸಲಾಗಿದೆ. ಹೀಗಾಗಿ, ಇಲಾಖೆಯಲ್ಲಿ ವಿವಿಧ ವೃಂದದ ಒಟ್ಟು 400 ಅಧಿಕಾರಿಗಳ ಪೈಕಿ 200 ಅಧಿಕಾರಿಗಳು ಪ್ರಿ ಮಚ್ಯೂರ್( ಅವಧಿ ಪೂರ್ವ ಮುನ್ನ) ಕಾರಣ ಕೊಟ್ಟು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಕೆಲವರಿಂದ ಬೇಡಿಕೆ ಇರುವ ಸ್ಥಳಗಳ ನಿಯುಕ್ತಿಗಾಗಿ ಅಧಿಕಾರಿಗಳಿಂದ ಕೋಟ್ಯಂತರ ರೂಪಾಯಿ ಪಡೆಯಲಾಗಿದೆ. ಹಣ ನೀಡದ ಕೆಲವರಿಗೆ ಡಿಸ್ಟಿಲರಿ, ಬ್ರಿವರಿ, ವೈನರಿ, ಮೈಕ್ರೋಬ್ರಿವರಿಯಲ್ಲಿರುವ ಹುದ್ದೆಗಳನ್ನು ತೋರಿಸಲಾಗಿದೆ. ಹೀಗಾಗಿ,ಪೊಲೀಸ್ ಇಲಾಖೆಯಂತೆ ಅಬಕಾರಿ ಇಲಾಖೆಯಲ್ಲಿಯೂ ಅಸಮರ್ಪಕವಾಗಿ ವರ್ಗಾವಣೆ ದಂಧೆ ನಡೆದಿದೆ.

ಅಧಿಕಾರ ಸ್ವೀಕಾರದಿಂದ ವಂಚಿತ: ಆ.2ರಂದು 9 ಅಬಕಾರಿ ಅಧೀಕ್ಷಕರಿಗೆ, ಅಬಕಾರಿ ಉಪ ಆಯುಕ್ತರ ಹುದ್ದೆಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ವಿಜಯಪುರಕ್ಕೆ ಪಿ.ಸಂಗನಗೌಡ, ಬಾಗಲಕೋಟೆಗೆ ಶಿವಲಿಂಗಪ್ಪ ಬನಹಟ್ಟಿ, ಬೆಂಗಳೂರಿನ ಮೆ:ಜಾನ್ ಡಿಸ್ಟಿಲರೀಸ್‌ಗೆ ಸ್ಮಿತಾ ರಾವ್, ಹಾಸನಕ್ಕೆ ಮೋತಿಲಾಲ್, ದಾವಣಗೆರೆಗೆ ಆರ್.ಎಸ್.ಸ್ವಪ್ನಾ, ಬೆಂಗಳೂರಿನ ಬಿಯುಡಿ-4ಕ್ಕೆ ಕ್ಯಾಪ್ಟನ್ ಅಜಿತ್ ಕುಮಾರ್, ಚಿಕ್ಕಮಗಳೂರಿಗೆ ವೈ.ಭರತೇಶ್, ದಕ್ಷಿಣ ಕನ್ನಡಕ್ಕೆ ಟಿ.ಎಂ.ಶ್ರೀನಿವಾಸ್ ಹಾಗೂ ವಿಜಯನಗರಕ್ಕೆ ಸಿ.ಕೆ.ಮಹೇಂದ್ರ ಅಬಕಾರಿ ಉಪ ಆಯುಕ್ತ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಆದರೆ, ಇದರಲ್ಲಿ ಕೆಲವರಿಗೆ ಹೊಸದಾಗಿ ಅಧಿಕಾರ ಸ್ವೀಕಾರದಿಂದ ವಂಚಿತರಾಗಿದ್ದಾರೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಅಬಕಾರಿ ಉಪ ಆಯುಕ್ತರು, ಮುಂಬಡ್ತಿ ಪಡೆದಿದ್ದವರಿಗೆ ಹುದ್ದೆ ಬಿಟ್ಟುಕೊಡದೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ, ಮುಂಬಡ್ತಿ ಸಿಕ್ಕಿ 14 ದಿನಗಳು ಕಳೆದರೂ ಹುದ್ದೆಯೂ ಸಿಗದೆ ಅಧಿಕಾರಿಗಳು ಪರದಾಡುವಂತಾಗಿದೆ. 9 ಮಂದಿ ಪೈಕಿ ಒಬ್ಬರು ಹುದ್ದೆ ಸಿಕ್ಕರೂ ಅಧಿಕಾರ ಸ್ವೀಕರಿಸದೆ ಬೇರೆ ಜಿಲ್ಲೆಗೆ ತೆರಳಲು ಸಚಿವರ ಬಳಿ ಲಾಬಿ ಮಾಡುತ್ತಿರುವ ಪ್ರಯತ್ನಗಳು ನಡೆಯುತ್ತಿವೆ.

ನಲುಗಿದ ಇಲಾಖೆ: ಆಂತರಿಕವಾಗಿ ಹಲವು ಸಮಸ್ಯೆಗಳು ಇಲಾಖೆಯಲ್ಲಿ ಹಾಸು ಹೊದ್ದು ಮಲಗಿವೆ. ಅಕ್ರಮ ಮದ್ಯ ಮಾರಾಟ ತಡೆಯಲು ಇಲಾಖೆ ನಿರ್ಲಕ್ಷ್ಯವಹಿಸಿದರೆ, ಕೆಲ ಅಧಿಕಾರಿಗಳ ಹಿಡಿತದಲ್ಲಿ ಇಲಾಖೆಯಿದೆ. ವರ್ಗಾವಣೆ ದಂಧೆ, ಮಥ್ಲಿ ಮನಿ ದಂಧೆ ಹಾಗೂ ಅಧಿಕಾರಿಗಳ ಹಣದ ದಾಹ ಸೇರಿ ಇತರ ಭ್ರಷ್ಟಾಚಾರಗಳು ಇಲಾಖೆಯಲ್ಲಿ ಮೀತಿ ಮೀರಿವೆ. ಹೊಸ ಸರ್ಕಾರ ಬಂದ ಬಳಿಕ ಇಲಾಖೆಯಲ್ಲಿ ಇನ್ನಷ್ಟು ಭ್ರಷ್ಟಾಚಾರ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳಲು ವಿಲವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಇಲಾಖೆಯಲ್ಲಿ ವರ್ಗಾವಣೆ ದಂಧೆ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net