ಗ್ರಾಪಂ ಒಣ ತ್ಯಾಜ್ಯ ನಿರ್ವಹಣೆಗೆ ಕ್ರಮ : ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ಮಾಹಿತಿ

New Project (2)
Published on

ಬಂಟ್ವಾಳ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಣತ್ಯಾಜ್ಯದ ಸಮಸ್ಯೆ ನಿವಾರಣೆಗೆ ಈಗಾಗಲೇ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ಘಟಕ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಸಂಗ್ರಹವಾದ ಒಣ ತ್ಯಾಜ್ಯದ ಸೂಕ್ತ ವಿಲೇವಾರಿಯನ್ನು ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದ ಮೂಲಕ ಮಾಡಲಾಗುತ್ತಿದೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಕೆ. ತಿಳಿಸಿದರು.

ಬುಧವಾರ ಬಂಟ್ವಾಳ ತಾಲೂಕು ಪಂಚಾಯಿತಿಯ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಬಂಟ್ವಾಳ ಹಾಗೂ ಉಳ್ಳಾಲ, ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ವಿಎಸ್‌ಪಿ ತಯಾರಿ ಬಗ್ಗೆ ತರಬೇತಿ ಕಾರ್ಯಾಗಾರ ಹಾಗೂ ನರಿಕೊಂಬು ಎಂಆರ್‌ಎಫ್ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಎಂಬುದು ನಿರಂತರ ಕಾರ್ಯ ನಿರ್ವಹಿಸುವಂತಾಗಲು ಗ್ರಾಮ ಪಂಚಾಯಿತಿ ಸಹಕಾರ ಮುಖ್ಯ. ಪ್ರತಿಯೊಬ್ಬರ ಆಸ್ತಿಯಂತೆ ಭಾವಿಸಿ ಸಹಕಾರ ನೀಡಬೇಕು. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಕಾರ್ಯನಿರ್ವಹಣೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಸಲಹೆ ನೀಡಿದರು. ಮಾಣಿ, ಕುರ್ನಾಡು, ಕೆದಿಲ, ಕೇಪು, ಅಳಿಕೆ, ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ಸಂಗ್ರಹದ ಕುರಿತು ಅಭಿಪ್ರಾಯ ಮಂಡಿಸಿದರು.

ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿದರು. ಉಳ್ಳಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಎಸ್.ನಟೇಶ್ ಕುಮಾರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಜಗದೀಶ್, ದ.ಕ. ಜಿಪಂ ಎಸ್‌ಬಿಎಂ ಜಿಲ್ಲಾ ಸಮಾಲೋಚಕರಾದ ನವೀನ್, ಪವನ್, ಎಂಆರ್‌ಎಫ್ ಆಪರೇಟರ್ ಸಚಿನ್ ಶೆಟ್ಟಿ, ಬಂಟ್ವಾಳ ತಾಲೂಕಿನ 39 ಗ್ರಾಪಂ ಮತ್ತು ಉಳ್ಳಾಲ ತಾಲೂಕಿನ 17 ಗ್ರಾಪಂ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಸ್‌ಬಿಎಂ ತಾಲೂಕು ವಿಷಯ ನಿರ್ವಾಹಕರು, ತಾಲೂಕು ಐಇಸಿ ಸಂಯೋಜಕರು ಭಾಗವಹಿಸಿದ್ದರು.

ಅಗತ್ಯವಿರುವಷ್ಟು ಕಸ ಸಂಗ್ರಹವಾಗುತ್ತಿಲ್ಲ

ನರಿಕೊಂಬು ಎಂಆರ್‌ಎಫ್ ಘಟಕಕ್ಕೆ ಪ್ರತಿದಿನ 7 ಮೆಟ್ರಿಕ್ ಟನ್ ತ್ಯಾಜ್ಯದ ಅವಶ್ಯಕತೆ ಇದ್ದು, ಪ್ರಸ್ತುತ 2.5 ಮೆಟ್ರಿಕ್ ಟನ್ ತ್ಯಾಜ್ಯವಷ್ಟೇ ಸಂಗ್ರಹವಾಗುತ್ತಿದೆ. 4.5 ಮೆಟ್ರಿಕ್ ಟನ್ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂಗ್ರಹಿಸಲು ಕ್ರಮವಹಿಸಬೇಕು. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿದಂತೆ ಇತರೆ ಅನುದಾನದಡಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇದರ ಕಾರ್ಯನಿರ್ವಹಣೆ ಜವಾಬ್ದಾರಿಯ ಜತೆಗೆ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಡಾ.ಆನಂದ್ ಕೆ. ತಿಳಿಸಿದರು.

ಎಂಆರ್‌ಎಫ್ ಘಟಕಕ್ಕೆ ಭೇಟಿ

ನರಿಕೊಂಬು ಗ್ರಾಪಂ ವ್ಯಾಪ್ತಿಯ ಶಂಭೂರುವಿನ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ದ.ಕ. ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಆನಂದ್ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಂಟ್ವಾಳ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್, ಉಳ್ಳಾಲ ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಎಸ್.ನಟೇಶ್ ಕುಮಾರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಜಗದೀಶ್, ದ.ಕ ಜಿಪಂ ಎಸ್‌ಬಿಎಂ ಜಿಲ್ಲಾ ಸಮಾಲೋಚಕರಾದ ನವೀನ್, ಪವನ್, ನರಿಕೊಂಬು ಗ್ರಾಪಂ ಅಧ್ಯಕ್ಷ ಸಂತೋಷ್ ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net