

ಪಡುಬಿದ್ರಿ: ಕೊರಗ ಮಹಿಳೆಯರು ಉನ್ನತ ವಿದ್ಯಾಭ್ಯಾಸ ಮಾಡಬೇಕು, ಆರ್ಥಿಕವಾಗಿ ಸಬಲರಾಗುವುದರ ಮೂಲಕ ತಮ್ಮ ಬದುಕನ್ನು ಸದೃಢಗೊಳಿಸಿಕೊಳ್ಳಬೇಕು ಎಂದು ಪ್ರತಿಭಾ ಆರ್.ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಮತ್ತು ನಮ್ಮ ನ್ಯಾಯ ಕೂಟ ಸಹಯೋಗದಲ್ಲಿ ಪೆರ್ನಾಲು ಆದಿವಾಸಿ ಶಿಕ್ಷಣ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಕುರಿತು ಸಬಲೀಕರಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಾಲ್ಯವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಮಹಿಳಾ ಹಕ್ಕುಗಳು ಮತ್ತು ಸಾಂವಿಧಾನಿಕ ಅವಕಾಶಗಳು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಹಿಂದು ವಿವಾಹ ಕಾಯ್ದೆ ಕುರಿತು ಕಾರ್ಯಾಗಾರ ನಡೆಯಿತು.
ನಮ್ಮ ನ್ಯಾಯಕೂಟ ಅಧ್ಯಕ್ಷ ಬಾಲರಾಜ್ ಅಧ್ಯಕ್ಷತೆ ವಹಿಸಿದ್ದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ - ಕೇರಳ ಸಂಘಟನೆ ವಿನಯ ಅಡ್ವೆ, ಸಂಪನ್ಮೂಲ ವ್ಯಕ್ತಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಪ ಕಾನೂನು ನೆರವು ಅಭಿರಕ್ಷಕ ಶ್ರೀನಿವಾಸ ಉಪಾಧ್ಯ ಉಪಸ್ಥಿತರಿದ್ದರು. ಶಶಿಕಲಾ ಮಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಿಕಾ ಮಣಿಪಾಲ್ ಸ್ವಾಗತಿಸಿದರು. ವಿಮಲಾ ಕಳ್ತೂರ್ ನಿರೂಪಿಸಿದರು. ದಿವಾಕರ್ ಕಳ್ತೂರ್ ವಂದಿಸಿದರು.