ಜಾಗರೂಕತೆಯಿಂದ ಮತ ಎಣಿಕೆ ಮಾಡಿ: ಡಿಸಿ ಎಂ.ಸುಂದರೇಶ ಬಾಬು

Untitled design
Published on

ಕೊಪ್ಪಳ: ವಿಧಾನಸಭೆ ಚುನಾವಣೆ ಅಂಗವಾಗಿ ಮೇ 13ರಂದು ನಗರದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಎಣಿಕೆ ಮೇಲ್ವಿಚಾರಕರು, ಸಹಾಯಕರು, ಮೈಕ್ರೋ ವೀಕ್ಷಕರು, ಹೆಚ್ಚುವರಿ ಎಣಿಕೆ ಸಿಬ್ಬಂದಿ ಮತ ಎಣಿಕೆ ಕೋಣೆಯಲ್ಲಿ ಶಿಸ್ತು ಪಾಲನೆ ಮತ್ತು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚಿಸಿದರು.


ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮತ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಮೈಕ್ರೋ-ವೀಕ್ಷಕರು, ಹೆಚ್ಚುವರಿ ಎಣಿಕೆ ಸಿಬ್ಬಂದಿಗೆ ಶನಿವಾರ ಹಮ್ಮಿಕೊಂಡಿದ್ದ ಮತ ಎಣಿಕೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿರಲಿ

ಮುಕ್ತ ಮತ್ತು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸಬೇಕು. ಸಮಯಕ್ಕೆ ಸರಿಯಾಗಿ ಮತ ಎಣಿಕೆ ಕೇಂದ್ರಕ್ಕೆ ಹಾಜರಾಗಬೇಕು. ಅಂಚೆ ಮತದಾನದ ಮತ ಎಣಿಕೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ಎಣಿಕೆಗಾಗಿ ಗೆಜೆಟೆಡ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವಸರ ಮಾಡದೆ ಸರಿಯಾಗಿ ಮತ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ಸುತ್ತಿನ ಮತ ಎಣಿಕೆ ನಂತರ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸುವುದು ಕಡ್ಡಾಯ ಎಂದರು.

ಏಜೆಂಟರು ಬ್ಯಾಡ್ಜ್ ಧರಿಸುವುದು ಕಡ್ಡಾಯ

ಏಜೆಂಟರು ಬ್ಯಾಡ್ಜ್ ಧರಿಸುವುದು ಕಡ್ಡಾಯ. ಬ್ಯಾಡ್ಜ್ ಇಲ್ಲದ ಏಜೆಂಟರರಿಗೆ ಎಣಿಕೆ ಕೇಂದ್ರಕ್ಕೆ ಪ್ರವೇಶವಿಲ್ಲ. ಶಿಸ್ತು, ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಬೇಕು. ಎಣಿಕೆ ಕೇಂದ್ರದೊಳಗೆ ಮೊಬೈಲ್ ಬಳಸುವಂತಿಲ್ಲ. ಟೇಬಲ್‌ನಿಂದ ಟೇಬಲ್‌ಗೆ ಹಾಗೂ ಹಾಲ್‌ನಿಂದ ಹಾಲ್‌ಗೆ ಓಡಾಡುವಂತಿಲ್ಲ. ವಿದ್ಯುನ್ಮಾನ ಮತಯಂತ್ರಗಳನ್ನು ಮುಟ್ಟುವಂತಿಲ್ಲ. ಚುನಾವಣಾಧಿಕಾರಿ ನಿರ್ದೇಶನ, ಸೂಚನೆಗಳನ್ನು ತಪ್ಪದೆ ಪಾಲಿಸಬೇಕು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ಧಮ್ ಇದ್ದರೆ ಬಾಂಡ್ ಬದಲು ಚೆಕ್ ಕೊಡುವಂತೆ ಮಾಧುಸ್ವಾಮಿ ಸವಾಲ್
ಎಡಿಸಿ ಸಾವಿತ್ರಿ ಕಡಿ ಮಾತನಾಡಿದರು. ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮತ ಎಣಿಕೆ ತರಬೇತಿ ಪ್ರಾತ್ಯಕ್ಷಿಕೆ ನೀಡಿದರು. ವಿದ್ಯಾಧರ ಅಂಚೆ ಮತ ಎಣಿಕೆ ಕುರಿತು ತರಬೇತಿ ನೀಡಿದರು. ಚುನಾವಣಾಧಿಕಾರಿಗಳು, ಸಹಾಯಕರು, ಎಣಿಕೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net