More

    ಕಾಂಗ್ರೆಸ್‌ಗೆ ಧಮ್ ಇದ್ದರೆ ಬಾಂಡ್ ಬದಲು ಚೆಕ್ ಕೊಡುವಂತೆ ಮಾಧುಸ್ವಾಮಿ ಸವಾಲ್

    ಹುಳಿಯಾರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಗ್ಯಾರಂಟಿಯೇ ಇಲ್ಲ, ಅಂತಹುದರಲ್ಲಿ ಹೆಣ್ಣು ಮಕ್ಕಳಿಗೆ ಬಾಂಡ್ ಕೊಟ್ಟು ವೋಟು ಕೇಳುತ್ತಿದ್ದಾರೆ. ಬೆಲೆಯಿಲ್ಲದ ಈ ಬಾಂಡ್ ಬದಲು ನಿಮಗೆ ಧಮ್ ಇದ್ದರೆ ಚೆಕ್‌ಗಳನ್ನು ಕೊಡಿ. ಕಡೇ ಪಕ್ಷ ಬೌನ್ಸ್ ಆದಾಗ ಕೇಸ್ ಹಾಕಿ ಹಣ ವಸೂಲಿ ಮಾಡಬಹುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸವಾಲು ಹಾಕಿದರು.

    ಶೆಟ್ಟಿಕೆರೆಯಲ್ಲಿ ಶುಕ್ರವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣ ಉಚಿತ ಎಂದು ಘೋಷಿಸಿದ್ದೀರಿ. ಇದನ್ನೇ ಗಂಡಸರಿಗೆ ಕೊಟ್ಟಿದ್ದರೆ ತರಕಾರಿ ತರಲೋ, ರೇಷನ್ ತರಲೋ ಹೋಗಿ ಬರಲು ಅನುಕೂಲ ಆಗುತ್ತಿತ್ತು. ಮನೆಯಲ್ಲಿರುವ ಹೆಣ್ಣುಮಕ್ಕಳನ್ನು ಬಸ್‌ನಲ್ಲಿ ಓಡಾಡಿಸುವ ಕೆಟ್ಟ ನಿರ್ಧಾರ ಇದು ಎಂದು ಟೀಕಿಸಿದರು.

    ಗ್ಯಾರಂಟಿಯೇ ಇಲ್ಲದ ಬಾಂಡ್‌ಗಳನ್ನು ನಂಬಿ ಮತ ಹಾಕಬೇಡಿ. 10 ವರ್ಷಗಳ ಕಾಲ ಕೈಯಲ್ಲಿ ಅಧಿಕಾರವಿದ್ದರೂ ಹೇಮಾವತಿ ನೀರು ಹರಿಸದ, ಅಭಿವೃದ್ಧಿ ಕೆಲಸ ಮಾಡದವರಿಗೆ ಅನುಕಂಪ ತೋರಿಸಬೇಡಿ. ಮತ ಹಾಕುವಾಗ ನಿಮ್ಮ ಮನೆಯ ನಲ್ಲಿಯಲ್ಲಿ ಬರುವ ನೀರನ್ನು ನೋಡಿ, ಮನೆಯ ಮುಂದಿನ ರಸ್ತೆಯನ್ನು ನೋಡಿ, ನಳನಳಿಸುತ್ತಿರುವ ನಿಮ್ಮ ತೋಟಗಳನ್ನು ನೋಡಿ, ಇದಕ್ಕೆ ಕಾರಣರಾದವರಾರು ಎಂಬುದನ್ನು ಮನಗಂಡು ನನಗೆ ಮತ ಕೊಡಿ ಎಂದು ಮನವಿ ಮಾಡಿದರು.

    ಶೆಟ್ಟಿಕೆರೆಯಲ್ಲಿ ಶೇ.90 ಮತ ನಿರೀಕ್ಷೆ: ಶೆಟ್ಟಿಕೆರೆ ಹೋಬಳಿ ನನ್ನ ಹೋಬಳಿ. ಈ ಹೋಬಳಿಗೆ ಉಳಿದ ಹೋಬಳಿಗಳಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ. ನಾನು ಶಾಸಕನಾಗುವ ಮುಂಚೆ ನೀರಿನ ಹಾಹಾಕಾರವಿತ್ತು, ರಸ್ತೆಗಳು ಗುಂಡಿಬಿದ್ದು ಓಡಾಡಲಾಗದಂತಹ ಸ್ಥಿತಿಯಿತ್ತು. ಕ್ಷೇತ್ರದ ಎಲ್ಲ ಸಮಸ್ಯೆ ಬಗೆಹರಿಸಿದ್ದೇನೆ. ಈಗ ನನ್ನ ಎದುರು ಸ್ಪರ್ಧಿಸಿರುವವರಿಗೆ ನನ್ನಷ್ಟು ಕೆಲಸ ಮಾಡುವ ಸಾಮರ್ಥ್ಯ ಇಲ್ಲ. ಇದ್ದಿದ್ದರೆ ಎಲ್ಲ ವೋಟು ನನಗೆ ಕೊಡಿ ಎಂದು ಕೇಳುತ್ತಿರಲಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

    ನನ್ನ ಯೋಜನೆ ಸ್ಥಗಿತವಾಗಲು ಬಿಡಬೇಡಿ: ಎತ್ತಿನಹೊಳೆ, ಭದ್ರ ಯೋಜನೆಯಲ್ಲಿ ಒಂದೇ ಒಂದು ಹನಿ ನೀರು ತಾಲೂಕಿಗೆ ಅಲೋಕೇಷನ್ ಆಗಿರಲಿಲ್ಲ. ತಾಲೂಕಿಗೆ ನೀರು ಕೊಡದೆ ಹೇಗೆ ನಾಲೆ ಮಾಡ್ತಿರಿ ಎಂದು ತೊಡೆತಟ್ಟಿದಾಗ ನೀರಿನ ಹಂಚಿಕೆ ಮಾಡಿದ್ದಾರೆ. ಈ ನೀರನ್ನು ಬಳಕೆ ಮಾಡಿಕೊಂಡು ತಾಲೂಕಿನ ಶೇ.90 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದೇನೆ. ಈ ಚುನಾವಣೆಯಲ್ಲಿ ನಾನೇನಾದರೂ ಸೋತರೆ ಹೇಮಾವತಿ ಯೋಜನೆಗಾದ ಸ್ಥಿತಿಯೇ ಇದಕ್ಕೂ ಬರುತ್ತದೆ. ಹಾಗಾಗಿ ಕ್ಷೇತ್ರದಲ್ಲಿ ಆಗಬೇಕಿರುವ ಎತ್ತಿನಹೊಳೆ, ಭದ್ರೆ, ತಾಯಿಮಕ್ಕಳ ಆಸ್ಪತ್ರೆ, ವಿದ್ಯುತ್ ಸ್ಥಾವರ, ಕೆಎಸ್‌ಆರ್‌ಟಿಸಿ ಡಿಪೋ, ಹುಳಿಯಾರು ಆಸ್ಪತ್ರೆ ಇವುಗಳನ್ನು ಮುಂದುವರಿಸಲು ಮತ್ತೊಮ್ಮೆ ನನಗೆ ಅವಕಾಶ ಕೊಡಿ ಎಂದು ಮಾಧುಸ್ವಾಮಿ ಹೇಳಿದರು.

    ಸಣ್ಣಸಣ್ಣ ವಿಷಯಕ್ಕೆ ಮುನಿಸಿಕೊಳ್ಳಬೇಡಿ: ತಾಲೂಕಿನಲ್ಲಿ ಒಂದೇ ಒಂದು ಗಲಭೆಯಾಗದಂತೆ, ಒಂದೇ ಒಂದು ಪ್ರತಿಭಟನೆ ನಡೆಯದಂತೆ ಆಡಳಿತ ಮಾಡಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೆಲಸ ಮಾಡುವಾಗ ಕೆಲ ಕಾರ್ಯಕರ್ತರನ್ನು ಸರಿಯಾಗಿ ಮಾತನಾಡಿಸಲು ಆಗಿರಲಿಲ್ಲ, ಸುಮ್ಮನೆ ನಮ್ಮ ಮನೆಗೆ ಅಲೆಯದೆ ಕೆಲಸ ಕಾರ್ಯ ನೋಡಿಕೊಳ್ಳಲಿ ಎಂದು ಗದರಿರಬಹುದು. ಇದನ್ನೇ ಮಹಾಪರಾಧ ಎಂದು ಭಾವಿಸಿ ನನ್ನನ್ನು ಮಾತನಾಡಿಸಲಿಲ್ಲ, ನನಗೆ ಕಡ್ಲೇಬೀಜ ಕೊಡ್ಲಿಲ್ಲ, ನನಗೆ ಗೋಡಂಬಿ ಕೊಡ್ಲಿಲ್ಲ ಎಂದು ಮುನಿಸಿಕೊಳ್ಳಬೇಡಿ. ನಿಮ್ಮ ಮುನಿಸನ್ನು ಕ್ಷೇತ್ರದ ಅಭಿವೃದ್ಧಿಗಾಗಿ ಬಿಟ್ಟು ಚುನಾವಣೆಯಲ್ಲಿ ನನ್ನೊಂದಿಗೆ ಹಿಂದಿನಂತೆ ಕೈ ಜೋಡಿಸಿ ಎಂದು ಮಾಧುಸ್ವಾಮಿ ಮನವಿ ಮಾಡಿದರು.

    ಮೀಸಲಾತಿ ಹೆಚ್ಚಿಸಿದ ಬಿಜೆಪಿ ಋಣ ತೀರಿಸುವಂತೆ
    ಕೆಂದ್ರ ಸಚಿವ ನಾಯಣಸ್ವಾಮಿ ಕರೆ

    ಚಿಕ್ಕನಾಯಕನಹಳ್ಳಿ: 75 ವರ್ಷಗಳಿಂದ ಮೀಸಲಾತಿ ಹೆಚ್ಚಿಸದೆ ವಂಚಿಸಲಾಗಿತ್ತು. ಶೋಷಿತ ವರ್ಗಕ್ಕೂ ಮೀಸಲಾತಿ ನೀಡುವ ಉದ್ದೇಶದಿಂದ ಮೀಸಲಾತಿ ಪ್ರಮಾಣವನ್ನು ಶೇ.15 ರಿಂದ 17ಕ್ಕೆ ಹೆಚ್ಚಿಸಿರುವ ಬಿಜೆಪಿ ಸರ್ಕಾರದ ಋಣವನ್ನು ಎಸ್‌ಸಿ ಸಮುದಾಯ ತೀರಿಸಬೇಕಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

    ಪಟ್ಟಣದ ನವೋದಯ ಕಾಲೇಜಿನ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಜೆ.ಸಿ.ಮಾಧುಸ್ವಾಮಿ ಪರ ಮತಯಾಚಿಸಿ ಮಾತನಾಡಿದರು.

    ಮನೆ, ಗ್ಯಾಸ್, ನೀರು, ವಿದ್ಯುತ್ ನೀಡುವ ಜತೆಗೆ ಮೀಸಲಾತಿ ಹೆಚ್ಚು ಮಾಡಿದ್ದು ಬಿಜೆಪಿ. ವಂಚನೆಗೊಳಗಾಗಿದ್ದ ಸಮುದಾಯಗಳನ್ನು ಗುರುತಿಸಿ ಜನಸಂಖ್ಯಾ ಆಧಾರದ ಮೇಲೆ ಸಮಾನವಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಈ ಹಿಂದೆ ವಿದ್ಯಾರ್ಥಿವೇತನವನ್ನು ಇವರೇ ನುಂಗಿ ಹಾಕುತ್ತಿದ್ದರು. ಆದರೆ 9 ವರ್ಷಗಳಿಂದ ನೇರವಾಗಿ ವಿದ್ಯಾರ್ಥಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದರು.

    ಉದ್ಯೋಗ, ಶಿಕ್ಷಣ ಇಲ್ಲದ ಅಲೆಮಾರಿಗಳ ಅಭಿವೃದ್ಧಿಗಾಗಿ ಮೀಸಲಾತಿ ಹೆಚ್ಚಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮತ ನೀಡುವ ಮೂಲಕ ಪಕ್ಷದ ಋಣ ತೀರಿಸಬೇಕಿದೆ ಎಂದರು.

    ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಒಳಮೀಸಲಾತಿ ರದ್ದುಪಡಿಸುತ್ತೇವೆಂದು ಹೇಳುವ ಕಾಂಗ್ರೆಸ್ಸಿನ ಮಲ್ಲಿಕಾರ್ಜನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನಸಾಕ್ಷಿ ಇಟ್ಟುಕೊಂಡು ಮಾತನಾಡಲಿ. ಸುಖಾಸುಮ್ಮನೆ ಒಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದರು.

    ಉತ್ತರ ಪ್ರದೇಶ ಸಂಸದ ರಾಮದೇವ್‌ಜೈನ್, ಬಿಜೆಪಿ ಮಂಡಲಾಧ್ಯಕ್ಷ ಕೇಶವಮೂರ್ತಿ, ಪ್ರಧಾನಕಾರ್ಯದರ್ಶಿ ನಿರಂಜಮೂರ್ತಿ ಇತರರು ಇದ್ದರು.

    ಆಗ ಯಾರೂ ಪ್ರಶ್ನೆ ಮಾಡಲಿಲ್ಲ: ಪರಿಶಿಷ್ಟರ ಮೀಸಲಾತಿ ಹೆಚ್ಚಿಸಲಾಗಿದೆ. ಸಂವಿಧಾನದಡಿ ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಿದಾಗ ಕೇವಲ 6 ಜಾತಿಗಳು ಇದ್ದವು. ನಂತರ 1976ರಲ್ಲಿ ಹಲವು ಜಾತಿಗಳು ಸೇರ್ಪಡೆಯಾಗಿದ್ದು, ಆಗ ಯಾರೂ ಪ್ರಶ್ನೆ ಮಾಡಲಿಲ್ಲ. ಸದ್ಯ 101 ಜಾತಿಗಳು ಈ ಪಟ್ಟಿಯಲ್ಲಿವೆ. ಇದನ್ನು ಗಮನಿಸಿದ ನ್ಯಾಯಾಲಯ ಹಲವು ಜಾತಿಗಳಿಗೆ ಶೇ.15 ಹಾಗೂ ಒಂದೇ ಜಾತಿಗೆ ಶೇ.3 ಮೀಸಲಾತಿ ಸರಿಯೇ ಎಂದು ಕೇಳಿದಾಗ ಧರ್ಮಸಿಂಗ್ ಸರ್ಕಾರ ಜೆ.ಜೆ.ಸದಾಶಿವ ಆಯೋಗ ರಚಿಸಿ ವರದಿ ನೀಡುವಂತೆ ತಿಳಿಸಿತು. ನಂತರ 30 ವರ್ಷಗಳಿಂದ ವರದಿ ಜಾರಿಗೊಳಿಸಲಿಲ್ಲ. ಇದನ್ನು ಮನಗಂಡು 2011ರ ಜನಸಂಖ್ಯಾ ಆಧಾರದಲ್ಲಿ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಬಲಗೈಗೆ ಶೇ.5 ಹಾಗೂ ಎಡಗೈಗೆ ಶೇ.5.5 ಮೀಸಲಾತಿ ನೀಡಿದ್ದು, ಈ ಹಿಂದೆ ಆಗುತ್ತಿದ್ದ ಅನ್ಯಾಯ ಸರಿಪಡಿಸಿದ ಬಿಜೆಪಿ ಸರ್ಕಾರಕ್ಕೆ ಮತಹಾಕಿ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.

    ನಾವು ಈ ಬಾರಿ ಚುನಾವಣೆ ಮಾಡುತ್ತಿಲ್ಲ. ಮಾಡಿರುವ ಕೆಲಸಗಳಿಗೆ ಕೂಲಿ ಕೇಳುತ್ತಿದ್ದು, ಮತ ನೀಡುವ ಮೂಲಕ ನನಗೆ ಕೂಲಿ ನೀಡಿ. ಮತದಾನ ಮಾಡುವ ಮುನ್ನ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತಚಲಾಯಿಸಿ. | ಜೆ.ಸಿ.ಮಾಧುಸ್ವಾಮಿ, ಸಚಿವ, ಬಿಜೆಪಿ ಅಭ್ಯರ್ಥಿ


    ಸಾವಿರಾರು ಬೈಕ್‌ಗಳಲ್ಲಿ ಬಿಜೆಪಿ ಧ್ವಜ ಹಾರಾಟ

    ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಯುವಕರು ಶನಿವಾರ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರ ಜೈಕಾರ ಕೂಗುತ್ತಾ ಚುನಾವಣಾ ಪ್ರಚಾರ ನಡೆಸಿದರು. ಹಾಲುಗೊಣದಲ್ಲಿ ಪ್ರಾರಂಭವಾದ ಜಾಥಾ ಸೋಮನಹಳ್ಳಿ, ಗೋಡೆಕರೆ ಗೊಲ್ಲರಹಟ್ಟಿ, ಗೋಡೆಕೆರೆ, ನಡುವನಹಳ್ಳಿ, ಬಗ್ಗನಹಳ್ಳಿ, ಬುಳ್ಳೇನಹಳ್ಳಿ, ಹೊನ್ನೇಬಾಗಿ, ನೆಹರು ವೃತ್ತ, ತರಬೇನಹಳ್ಳಿ, ಜೆ.ಸಿ.ಪುರ, ಬ್ಯಾಡರಹಳ್ಳಿ, ಮಲಗೊಂಡನಹಳ್ಳಿ, ಪಂಕಜನಹಳ್ಳಿ, ಲಕ್ಷ್ಮಗೊಂಡನಹಳ್ಳಿ, ತಿಗಳನಹಳ್ಳಿ, ಗ್ಯಾರೇಹಳ್ಳಿ, ಅಗಸರಹಳ್ಳಿ, ಚುಂಗನಹಳ್ಳಿ, ಕೊಡಲಾಗರ, ದುಗಡಿಹಳ್ಳಿ, ಬಾಚಿಹಳ್ಳಿ, ಹೆಸರಹಳ್ಳಿ, ಅಣೇಕಟ್ಟೆ, ಅರಳೀಕೆರೆ, ದಿಬ್ಬದಹಳ್ಳಿ, ಕುಪ್ಪೂರು, ಬೇವಿನಹಳ್ಳಿಗೇಟ್, ತಮ್ಮಡಿಹಳ್ಳಿ , ಮಂಚಸಂದ್ರ , ಮಾದಿಹಳ್ಳಿ, ಮಕುವಳ್ಳಿ, ಗೋಪಾಲನಹಳ್ಳಿ , ಸಾಸಲು, ಅಜ್ಜೇನಹಳ್ಳಿ, ಹೊಸಪಾಳ್ಯದ ಮೂಲಕ ಶೆಟ್ಟಿಕೆರೆ ತಲುಪಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts