More

    ರೈಲಿಂದ ಬಿದ್ದು ಮೃತರಾದ್ರೆ ರೈಲ್ವೆ ಇಲಾಖೆಯಿಂದಲೇ ಪರಿಹಾರ ಹೈಕೋರ್ಟ್


    ಪವಿತ್ರಾ ಕುಂದಾಪುರ ಬೆಂಗಳೂರು

    ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಡುವ ಪ್ರಯಾಣಿಕರ ಕುಟುಂಬಕ್ಕೆ ಪರಿಹಾರ ಕೊಡಬೇಕಾದ್ದು ರೈಲ್ವೆ ಇಲಾಖೆಯ ಹೊಣೆ ಎಂದೇಳಿರುವ ಹೈಕೋರ್ಟ್, ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ವಾರ್ಷಿಕ ಶೇ.7 ಬಡ್ಡಿಯೊಂದಿಗೆ 4 ಲಕ್ಷ ರೂ. ಪರಿಹಾರ ಪಾವತಿಸುವಂತೆ ರೈಲ್ವೆ ಇಲಾಖೆಗೆ ಆದೇಶ ಹೊರಡಿಸಿದೆ.


    ರೈಲು ಇಳಿಯುವಾಗ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಜಯಮ್ಮ ಎಂಬುವರ ಸಾವಿಗೆ ಪರಿಹಾರ ಕಲ್ಪಿಸುವ ಸಂಬಂಧ ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ತೀರ್ಪನ್ನು ಪ್ರಶ್ನಿಸಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಿ ರೋಜಮಣಿ ಹಾಗೂ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ತೀರ್ಪು ನೀಡಿದೆ.


    ಮೃತ ಜಯಮ್ಮ ತನ್ನ ಸಹೋದರಿಯೊಂದಿಗೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಇದು ಗೊತ್ತಾಗಿ ಆಕೆ ಕೆಳಗಿಳಿಯುವ ವೇಳೆ ರೈಲು ಚಲಿಸಲು ಆರಂಭಿಸಿತ್ತು. ಆಗ ನಿಯಂತ್ರಣ ಕಳೆದುಕೊಂಡು ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನು ಪರಿಗಣಿಸಿ ಆಕೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶಿಸುವಂತೆ ಅರ್ಜಿದಾರ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು.


    ಆದರೆ, ಈ ಘಟನೆ ಆಕಸ್ಮಿಕವಾಗಿ ನಡೆದಿದ್ದಲ್ಲ, ಉದ್ದೇಶಪೂರ್ವಕ ಎಂದು ರೈಲ್ವೆ ಇಲಾಖೆ ಹೇಳಿದರೂ ಅದಕ್ಕೆ ಸಾಕ್ಷಾೃಧಾರ ಒದಗಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ಆದೇಶವನ್ನು ತಳ್ಳಿಹಾಕುವಂತೆ ಅರ್ಜಿದಾರರು ವಾದಿಸಿದ್ದರು.


    ಮೃತ ಮಹಿಳೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಆಗ ಅವರು ಒಂದೋ ಪ್ರಯಾಣ ಮುಂದುವರಿಸಿ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲವೇ ಅಲಾರ್ಮ್ ಚೈನ್ ಎಳೆಯಬೇಕು. ಅದೆರಡನ್ನೂ ಮಾಡದೆ ರೈಲಿನಿಂದ ಇಳಿಯಲು ಪ್ರಯತ್ನಿಸಿ ಸ್ವಯಂಪ್ರೇರಿತ ಮತ್ತು ಉದ್ದೇಶಪೂರ್ವಕವಾಗಿ ಜಿಗಿದಿದ್ದಾರೆ. ಹೀಗಾಗಿ ಘಟನೆ ಆಕಸ್ಮಿಕವಾಗಿ ಸಂಭವಿಸಿದೆ ಎನ್ನಲಾಗದು. ಆದ್ದರಿಂದ ರೈಲ್ವೆ ಕಾಯ್ದೆಯ ಸೆಕ್ಷನ್ 123(ಇ) ಅನ್ವಯ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಪ್ರತಿವಾದ ಮಂಡಿಸಿತ್ತು.


    ಆದರೆ, ಚಲಿಸುತ್ತಿರುವ ರೈಲಿನಿಂದ ಇಳಿಯುವ ವೇಳೆ ಪ್ರಯಾಣಿಕರು ಸಾವಿಗೀಡಾದರೆ, ಹಕ್ಕುದಾರರಿಗೆ ಪರಿಹಾರವನ್ನು ಪಾವತಿಸಬೇಕಾಗಿರುವುದು ರೈಲ್ವೆಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿ ಸಲ್ಲಿಸಿದ ದಿನಾಂಕದಿಂದ ಇಲ್ಲಿಯವರೆಗೂ ವಾರ್ಷಿಕ ಶೇ.7 ಬಡ್ಡಿದರದೊಂದಿಗೆ 4 ಲಕ್ಷ ರೂ.ಗಳನ್ನು 8 ವಾರದೊಳಗಾಗಿ ಪಾವತಿಸುವಂತೆ ನಿರ್ದೇಶಿಸಿತು.

    ಎಂಟು ಲಕ್ಷ ರೂ. ಪರಿಹಾರ
    ಮೃತ ಜಯಮ್ಮ ಸಾವಿಗೆ ರೈಲ್ವೆಯಿಂದ 8 ಲಕ್ಷ ರೂ. ಪರಿಹಾರ ಕೋರಿದ್ದರು. ಆದೇಶದಲ್ಲಿ ಪೀಠವು ಪತ್ರಿವಾದಿಗಳು 4 ಲಕ್ಷ ರೂ.ಗಳನ್ನು ವಾರ್ಷಿಕ ಶೇ.7 ಬಡ್ಡಿಯೊಂದಿಗೆ ಪಾವತಿಸುವಂತೆ ಹೇಳಿದೆ. ಈ ಒಟ್ಟು ಮೊತ್ತ 8 ಲಕ್ಷ ರೂ. ತಲುಪದೆ ಹೋದಲ್ಲಿ ಪ್ರತಿವಾದಿಗಳು ಅರ್ಜಿದಾರರ ಮನವಿಯಂತೆ 8 ಲಕ್ಷ ರೂ. ಪಾವತಿಸಬೇಕು ಎಂದು ನ್ಯಾಯಪೀಠ ಹೇಳಿದೆ.

    ಏನಿದು ಪ್ರಕರಣ?
    2014 ರ ಫೆ.22ರಂದು ಜಯಮ್ಮ ತನ್ನ ಸಹೋದರಿ ರತ್ನಮ್ಮ ಅವರೊಂದಿಗೆ ಚನ್ನಪಟ್ಟಣ ರೈಲು ನಿಲ್ದಾಣಕ್ಕೆ ಹೋಗಿ ಮೈಸೂರಿನ ಅಶೋಕಪುರಂಗೆ ಹೋಗಲು ‘ತಿರುಪತಿ ಪ್ಯಾಸೆಂಜರ್’ ರೈಲಿಗಾಗಿ ಕಾಯುತ್ತಿದ್ದರು. ಆಗ ‘ಟುಟಿಕೋರಿನ್ ಎಕ್ಸ್‌ಪ್ರೆಸ್’ ರೈಲು ಬಂತು. ಇಬ್ಬರೂ ಆ ರೈಲು ಹತ್ತಿದ್ದರು. ರೈಲು ಅಶೋಕಪುರಂಗೆ ಹೋಗುವುದಿಲ್ಲ ಎಂದು ತಿಳಿದ ನಂತರ ರೈಲಿನಿಂದ ಜಯಮ್ಮ ಇಳಿಯುತ್ತಿದ್ದರು.

    ಆ ವೇಳೆ ರೈಲು ಚಲಿಸಲು ಪ್ರಾರಂಭವಾಗಿದೆ. ಹೀಗಾಗಿ ಸಮತೋಲನ ತಪ್ಪಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾದರು. ಘಟನೆಗೆ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೆ ನ್ಯಾಯಮಂಡಳಿ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೃತರ ಕುಟಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts